ಹಮದಾಬಾದ್[ಫೆ.24]: ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳುತ್ತಿರುವ ಡೊನಾಲ್ಡ್‌ ಟ್ರಂಪ್‌ ಅವರು ಗುಜರಾತಿನ ಅಹಮದಾಬಾದ್‌ನಲ್ಲಿ ಸೋಮವಾರ ಬರೋಬ್ಬರಿ 22 ಕಿ.ಮೀ. ರೋಡ್‌ ಶೋ ನಡೆಸಲಿದ್ದಾರೆ. ಈ ವೇಳೆ 28 ವೇದಿಕೆಗಳಲ್ಲಿ ಟ್ರಂಪ್‌ ಅವರಿಗೆ ಭಾರತದ ಶ್ರೀಮಂತ ಸಂಸ್ಕೃತಿಯನ್ನು ದರ್ಶನ ಮಾಡಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದೆಡೆ, ತಾಜ್‌ಮಹಲ್‌ ಭೇಟಿಗೆ ಟ್ರಂಪ್‌ ಹಾದು ಹೋಗುವ ಮಾರ್ಗದುದ್ದಕ್ಕೂ 3000 ಕಲಾವಿದರು ನೃತ್ಯ ಪ್ರದರ್ಶಿಸಿ ಸ್ವಾಗತ ಕೋರಲಿದ್ದಾರೆ.

ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಮೊಟೆರಾ ಕ್ರೀಡಾಂಗಣದವರೆಗೆ ಟ್ರಂಪ್‌ ಅವರು ರೋಡ್‌ ಶೋ ನಡೆಸಲಿದ್ದಾರೆ. ಅಲ್ಲಲ್ಲಿ 28 ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು, ದೇಶವ ವಿವಿಧ ಭಾಗಗಳ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.

ಇನ್ನು ಸಂಜೆ ಆಗ್ರಾಗೆ ಭೇಟಿ ನೀಡಲಿರುವ ಟ್ರಂಪ್‌ ಅವರು ವಿಮಾನ ನಿಲ್ದಾಣದಿಂದ ತಾಜ್‌ಮಹಲ್‌ವರೆಗೆ ಸಾಗುವ 10 ಕಿ.ಮೀ. ಉದ್ದದ ಹೆದ್ದಾರಿವರೆಗೂ 16 ಸಾವಿರ ಹೂಕುಂಡಗಳನ್ನು ಇಡಲಾಗಿದೆ. ಮಕ್ಕಳು 60 ಸಾವಿರ ಭಾರತ- ಅಮೆರಿಕ ಧ್ವಜವನ್ನು ಬೀಸಲಿದ್ದಾರೆ. 21 ಕಡೆ 3000 ನೃತ್ಯಗಾರರು ಪ್ರದರ್ಶನ ನೀಡಲಿದ್ದಾರೆ. 8 ನಿಮಿಷಗಳ ಪ್ರಯಾಣ ಅವಧಿಯಲ್ಲಿ ಈ ಎಲ್ಲವನ್ನೂ ಟ್ರಂಪ್‌ ಕಣ್ತುಂಬಿಕೊಳ್ಳಲಿದ್ದಾರೆ.

ಮೊದಲ ದಿನ ಟ್ರಂಪ್‌ ಮೆನು

ಖಮನ್‌ ಡೋಕ್ಲಾ, ಬಹುಧಾನ್ಯದ ರೋಟಿ, ಸಮೋಸ, ಜೇನುತುಪ್ಪದ ಬಿಸ್ಕತ್‌, ಎಳನೀರು, ಐಸ್‌ ಟೀ, ವಿಶೇಷ ಚಹಾ, ಇತರೆ ತಿನಿಸುಗಳನ್ನು ಅಹಮದಾಬಾದ್‌ನಲ್ಲಿ ಟ್ರಂಪ್‌ ಮಧ್ಯಾಹ್ನ ಸವಿಯಲಿದ್ದಾರೆ.

ಬೀಡಾಡಿ ದಿನಗಳು ಗೋಶಾಲೆಗೆ

ಟ್ರಂಪ್‌ ಆಗ್ರಾ ಭೇಟಿ ವೇಳೆ ಅವರ ಪ್ರಯಾಣಕ್ಕೆ ಬೀಡಾಡಿ ದನಗಳು ಅಡ್ಡಿ ಉಂಟು ಮಾಡಬಹುದು ಎಂಬ ಕಾರಣಕ್ಕೆ ಅವೆಲ್ಲವನ್ನೂ ಗೋಶಾಲೆಗೆ ಅಟ್ಟಲಾಗಿದೆ.

ಬೀದಿ ನಾಯಿಗಳು ಎತ್ತಂಗಡಿ

ಆಗ್ರಾದಲ್ಲಿರುವ ಬೀದಿ ನಾಯಿಗಳು ಟ್ರಂಪ್‌ ಪ್ರವಾಸ ವೇಳೆ ಕಿರಿಕಿರಿ ಮಾಡಬಹುದು ಎಂದು ಅವೆಲ್ಲವನ್ನೂ ನಗರದಿಂದ ಹೊರಕ್ಕೆ ಸ್ಥಳಾಂತರಿಸಲಾಗಿದೆ.

ಮಂಗನ ಕಾಯಲು 125 ಪೊಲೀಸರು

ತಾಜ್‌ಮಹಲ್‌ನಲ್ಲಿ ಅಂದಾಜು 5000 ಮಂಗಗಳು ಇವೆ. ಟ್ರಂಪ್‌ ಭೇಟಿ ವೇಳೆ ಇವು ಹಠಾತ್‌ ದಾಳಿ ಮಾಡಬಹುದು ಎಂಬ ಕಾರಣಕ್ಕೆ ಅವು ಹತ್ತಿರ ಬರದಂತೆ ನೋಡಿಕೊಳ್ಳಲು 125 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 5 ಲಂಗೂರ್‌ಗಳನ್ನು ತರಲಾಗಿದೆ.

ಟ್ರಂಪ್‌ ದಿಲ್ಲಿ ವಾಸ್ತವ್ಯಕ್ಕೆ ಶಾಪ್‌ರ್‍ಶೂಟರ್‌ ಭದ್ರತೆ

ಟ್ರಂಪ್‌ ಅವರು ಸೋಮವಾರ ದೆಹಲಿಯ ಐಷಾರಾಮಿ ಮೌರ್ಯ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಈ ಹೋಟೆಲ್‌ ಹಾಗೂ ಅದಕ್ಕೆ ಹೋಗುವ ಮಾರ್ಗಗಳಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಹೋಟೆಲ್‌ ಪಕ್ಕದ ಕಟ್ಟಡಗಳಲ್ಲಿ ಶಾಪ್‌ರ್‍ ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಶ್ವಾನ ಘಟಕ, ಕಮಾಂಡೋಗಳು, ಎನ್‌ಎಸ್‌ಜಿ ಸಿಬ್ಬಂದಿ, ಸ್ನೈಪರ್‌ಗಳಿಂದ ಭದ್ರತೆ ಒದಗಿಸಲಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಯ 40 ತುಕಡಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ನೂರಾರು ಸಿಸಿಟೀವಿ ಕೆಮೆರಾಗಳನ್ನು ಅಳವಡಿಸಲಾಗಿದೆ.