ಸುಕ್ಮಾ (ಛತ್ತೀಸ್‍ಗಢ, ಏ.6) ನಕ್ಸಲರ ದಾಳಿಯಲ್ಲಿ ಕಾಣೆಯಾಗಿರುವ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್‍ರೆಸೊಲ್ಯೂಟ್ ಆಕ್ಷನ್) ರಾಕೇಶ್ವರ ಸಿಂಗ್ ಮನ್ಹಾಸ್ ಕುಟುಂಬ ಕಣ್ಣೀರು  ಹಾಕುತ್ತಿದೆ. ಹಿಂದೆ ಅಭಿನಂದನ್ ಅವರನ್ನು ಕರೆತಂದ ರೀತಿ  ಪತಿಯನ್ನು ಕರೆದು ತರಲಾಗುತ್ತದೆ ಎಂಬ ವಿಶ್ವಾಸದಲ್ಲಿ ಕುಟುಂಬ ಇದೆ.

ಯೋಧನನ್ನು ಮಾವೋವಾದಿಗಳು ಸೆರೆ ಹಿಡಿದಿರಬಹುದು ಎಂದು ಶಂಕಿಸಲಾಗಿದೆ.  ಕಳೆದ ಶನಿವಾರ ತೆಕ್ಲಗುಡಂನಲ್ಲಿ ಹೊಂಚು ಹಾಕಿ ದಾಳಿ ನಂತರ ಮೊದಲಿಗೆ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಲಾಗಿತ್ತು. ನಂತರ ದಟ್ಟ ಅರಣ್ಯದಲ್ಲಿ ಹುಡುಕಾಟ ನಡೆಸಿದಾಗ 22 ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗಿತ್ತು.

ಸೇನೆಯ ಮೇಲೆ ನಕ್ಸಲರು ಏರಗಿದ್ದು ಏಕೆ? 

ಇದೇ ವೇಳೆ ಒಬ್ಬ ಯೋಧ ಕಾಣೆಯಾಗಿರುವುದರ ಬಗ್ಗೆ ಅಧಿಕಾರಿಗಳು ತಿಳಿಸಿದ್ದು , ಅದರ ಬಗ್ಗೆ ವಿಚಾರಣೆ ನಡೆಸಿದ ನಂತರ CRPF ಕೋಬ್ರಾ ಘಟಕದ ಕಾನ್ಸೆಟೆಬಲ್ ರಾಕೇಶ್ವರ ಸಿಂಗ್ ಮನ್ಹಾಸ್ ನಾಪತ್ತೆಯಾಗಿದ್ದಾರೆ ಎಂದು ಬಸ್ತಾರ್ ಪೊಲೀಸ್ ಇನ್‍ಸ್ಪೆಕ್ಟರ್ ಜನರಲ್ ಪಿ.ಸುಂದರರಾಜ್  ಮಾಹಿತಿ ನೀಡಿದ್ದರು. ಸ್ಥಳೀಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು.

ಮನ್ಹಾಸ್ ಮೂಲತಃ ಜಮ್ಮು ನಿವಾಸಿಯಾಗಿದ್ದು, ಕಾರ್ಯಾಚರಣೆ ವೇಳೆ ಇವರನ್ನು ಮಾವೋವಾದಿಗಳು ಅಪಹರಿಸಿರಬಹುದು ಎಂದು ಬಿಜಾಪುರ ಜಿಲ್ಲಾ ಎಸ್ಪಿ ಕಮಲೋಚನ್ ಕಶ್ಯಪ್‍ಅವರು ತಿಳಿಸಿದ್ದಾರೆ. 

ಅಭಿನಂದನ್ ಕರೆದುಕೊಂಡ ಬಂದ ರೀತಿಯಲ್ಲಿಯೇ ನನ್ನ ಪತಿಯನ್ನು ಕರೆದುಕೊಂಡು ಬರಲಾಗುತ್ತದೆ ಎಂದು ನಂಬಿದ್ದೇನೆ. ಶುಕ್ರವಾರ ಗಂಡನ ಜತೆ ಮಾತನಾಡಿದ್ದಾಗ ಆಪರೇಶನ್ ಮೇಲೆ ತೆರಳುತ್ತಿರುವುದಾಗಿ ಹೇಳಿದ್ದರು ಎಂದು ಪತ್ನಿ ಮೀನು ಮನ್ಹಾಸ್ ಕಣ್ಣೀರು ಹಾಕುತ್ತಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ಮಾಹಿತಿ ಬಿಟ್ಟರೆ ಬೇರಾವುದು ಅವರ ಬಳಿ ಇಲ್ಲ.

ನಕ್ಸಲ್ ಅಂಕಲ್, ದಯವಿಟ್ಟು  ಅಪ್ಪನನ್ನು ಬಿಟ್ಟುಬಿಡಿ.  ನಾಪತ್ತೆಯಾಗಿರುವ ಸಿಆರ್‌ಪಿಎಫ್ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಐದರ ಹರೆಯದ ಪುತ್ರಿ ರಾಘ್ವಿ ಮಾಡಿಕೊಂಡಿರುವ ಮನವಿ ಎಂಥ ಹೃದಯವನ್ನು ಕರಗಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.

ಇನ್ನು, ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಪ್ರತಿಕ್ರಿಯಿಸಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಿಬಿರಗಳನ್ನು ಸ್ಥಾಪಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.