Asianet Suvarna News Asianet Suvarna News

ಒಂದೇ ಮಳೆಗೆ ಸ್ವಿಮ್ಮಿಂಗ್ ಪೂಲ್‌ನಂತಾದ 200 ಕೋಟಿ ರೂಪಾಯಿ ವೆಚ್ಚದ ಸೇತುವೆ!

  • ಒಂದು ವರ್ಷದ ಹಿಂದೆ ನಿರ್ಮಾಣಗೊಂಡ ಸೇತುವೆ
  • ಮಳೆ ನೀರು ಹರಿದು ಹೋಗಲು ಜಾಗವೇ ಇಲ್ಲ
  • ವಾಹನ ಸವಾರರ ಪರದಾಟ, ಸ್ಥಳೀಯರಲ್ಲಿ ಆತಂಕ
bridge turns into a pool in Gujarat banaskantha after year of construction with rs 200 crore ckm
Author
Bengaluru, First Published Jul 3, 2022, 4:12 PM IST

ಗುಜರಾತ್(ಜು.03): ಸೇತುವೆ ನಿರ್ಮಾಣಗೊಂಡು ಸರಿಯಾಗಿ ಒಂದು ವರ್ಷ ಕಳೆದಿಲ್ಲ. ಬಿದ್ದಿದ್ದು ಒಂದೇ ಮಳೆ ಅಷ್ಟೆ. ಸೇತುವೆ ಮೇಲೂ ನೀರು, ಸೇತುವೆ ಕೆಳಗೂ ನೀರು. ಹಾಗಂತ ನೀರಿನ ಹರಿವು ಹೆಚ್ಚಾಗಿ ಸೇತುವೆ ಮೇಲಿನಿಂದ ಹರಿದು ಹೋಗಿಲ್ಲ. ಸೇತುವೆ ಮೇಲೆ ಬಿದ್ದ ಮಳೆ ನೀರು ಹರಿದು ಹೋಗಲು ಜಾಗವಿಲ್ಲ, ಈಜುಕೊಳದಂತಾಗಿದೆ.

ಇದು ಗುಜರಾತ್‌ನ ಬನಾಸಕಾಂತ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಿರುವ ಫ್ಲೈಓವರ್ ಸೇತುವೆ. ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚ ಮಾಡಿ ಫ್ಲೈ ಓವರ್ ನಿರ್ಮಿಸಲಾಗಿದೆ. ಆದರೆ ಉದ್ದನೆಯ ಫ್ಲೈ ಓವರ್  ಮೇಲೆ ಬಿದ್ದ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಣ್ಣದಾಗಿ ಪೈಪ್ ಹಾಕಲಾಗಿದೆ. ಆದರೆ ಈ ಪೈಪ್‌ನಲ್ಲಿ ಕಸಗಳು ತುಂಬಿಕೊಂಡು ನೀರು ಹರಿದು ಹೋಗುತ್ತಿಲ್ಲ. ಹೀಗಾಗಿ ಸಂಪೂರ್ಣ ಮಳೆ ನೀರು ಫ್ಲೇ ಓವರ್ ಮೇಲೆ ನಿಂತಿದೆ. 

ಚಿಕ್ಕಮಗಳೂರಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ

ಬನಾಸಕಾಂತ ಜಿಲ್ಲೆಯಲ್ಲಿನ ಟ್ರಾಫಿಕ್ ಸಮಸ್ಯೆ ಹಾಗೂ ಮುಕ್ತ ಪ್ರಯಾಣಕ್ಕೆ ಅನೂಕೂಲ ಮಾಡಿಕೊಡಲು ಬರೋಬ್ಬರಿ 4 ಕಿಲೋಮೀಟರ್ ಉದ್ದನೆಯ ಫ್ಲೈಓವರ್ ನಿರ್ಮಿಸಲಾಗಿದೆ. ಆದರೆ ಮಳೆಯಿಂದಾಗಿ ಇದೀಗ ಫ್ಲೈ ಓವರ್ ಮೇಲಿಂದ ಪ್ರಯಾಣಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಫ್ಲೈಓವರ್ ಮೇಲೆ ನೀರು ತುಂಬಿ ತುಳುಕುತ್ತಿದೆ.

ಆರಂಭಿಕ ಮಳೆಗೆ ಹೀಗಾದರೆ ಮುಂದಿನ ದಿನಗಳಲ್ಲಿ ಈ ಸೇತುವೆ ಸರೋವರವಾಗಲಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ಜಿಲ್ಲಾಡಳಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಅತ್ಯುತ್ತಮ ಫ್ಲೈ ಓವರ್ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಕಾಂಟ್ರಾಕ್ಟರ್ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಹೀಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ತವರು, ಸಿಎಂ ಆಗಿ ಆಡಳಿತ ನಡೆಸಿದ ರಾಜ್ಯದಲ್ಲೇ ಈ ರೀತಿ ಆಗಿದೆ ಎಂದರೆ ಇತರ ರಾಜ್ಯಗಳ ಪರಿಸ್ಥಿತಿ ಏನು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಗದಿತ ದಿನಾಂಕಕ್ಕಿಂತ ಆರು ದಿನಗಳ ಮೊದಲೇ ಮುಂಗಾರು ಮಳೆ ಹಿಗ್ಗಿದ್ದು, ಇಡೀ ದೇಶವನ್ನೇ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.‘ಈ ಹಿಂದೆ ಅಂದಾಜಿಸಿದಂತೆ ಜು. 8ರ ಬದಲು ಆರು ದಿನಗಳ ಮೊದಲೇ ನೈಋುತ್ಯ ಮಾನ್ಸೂನ್‌ ಶನಿವಾರ ಇಡೀ ದೇಶವನ್ನೇ ವ್ಯಾಪಿಸಿದೆ’ ಎಂದು ಐಎಂಡಿ ತಿಳಿಸಿದೆ.

ಸರಣಿ ಭೂಕಂಪನವಾದ ಕೊಡಗಿನ ಚೆಂಬು ಗ್ರಾಮದಲ್ಲಿ ಭೂಕುಸಿತ, ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಆತಂಕ

ಈ ಹಿಂದೆಯೂ ಕೂಡಾ ಜೂ.1 ರಂದು ಕೇರಳವನ್ನು ನೈಋುತ್ಯ ಮಾನ್ಸೂನ್‌ ಪ್ರವೇಶಿಸಲಿದೆ ಎಂದು ಐಎಂಡಿ ಅಂದಾಜಿಸಿತ್ತು. ಆದರೆ ಅದಕ್ಕೂ 3 ದಿನ ಮೊದಲೇ ಮೇ. 29 ರಂದು ಕೇರಳಕ್ಕೆ ಮಾನ್ಸೂನ್‌ ಪ್ರವೇಶವಾಗಿತ್ತು. ನೈಋುತ್ಯ ಮಾನ್ಸೂನ್‌ ಪ್ರವೇಶದೊಂದಿಗೆ ಉಷ್ಣ ಅಲೆಯಲ್ಲಿ ತತ್ತರಿಸುತ್ತಿದ್ದ ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ಮಳೆ ಆರಂಭವಾಗಿದೆ.

ಕೃಷಿಯಾಧಾರಿತ ದೇಶವಾದ ಭಾರತಕ್ಕೆ ನೈಋುತ್ಯ ಮುಂಗಾರು ಮಳೆಯು ಅತ್ಯಂತ ಪ್ರಮುಖವಾಗಿದೆ. ಈಗಾಗಲೇ ದೇಶವು ಶೇ. 8ರಷ್ಟುಮಳೆಯ ಕೊರತೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಾನ್ಸೂನ್‌ ಮಳೆಯು ಇನ್ನಷ್ಟುಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಹಮಾಮಾನ ತಜ್ಞರು ಜುಲೈನಲ್ಲಿ ಉತ್ತಮ ಮಳೆಯಾಗಬಹುದು ಎಂದು ನಿರೀಕ್ಷಿಸಿದ್ದಾರೆ.

Follow Us:
Download App:
  • android
  • ios