ಚಿಕ್ಕಮಗಳೂರಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ
* ಸೇತುವೆ ಮುಳುಗಡೆಯಾಗಲು ಆರು ಅಡಿ ಮಾತ್ರ ಬಾಕಿ
* ಕಾಫಿನಾಡಲ್ಲಿ ಮಳೆಗಾಲದಲ್ಲಿ ಮೊದಲು ಮುಳುಗುವ ಸೇತುವೆ ಹೆಬ್ಬಾಳ
* ಹೊರನಾಡು ಕಳಸ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.02): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಭಾಗದಲ್ಲಿ ಕಳೆದ ರಾತ್ರಿ ಸುರಿದಂತಹ ಧಾರಾಕಾರ ಮಳೆಯಿಂದ ಭದ್ರಾ ನದಿ ಮೈದುಂಬಿ ಹರಿದ ಪರಿಣಾಮ ಹೆಬ್ಬಾಳೆ ಸೇತುವೆಗೆ ಮುಳುಗಡೆ ಭೀತಿ ಆವರಿಸಿತ್ತು.
ಕುದುರೆಮುಖದಲ್ಲಿ ಭಾರೀ ಮಳೆ
ಚಿಕ್ಕಮಗಳೂರು ಜಿಲ್ಲೆಯ ಕಳಸ ಹಾಗೂ ಕುದುರೆಮುಖ ಸುತ್ತಮುತ್ತ ನಿನ್ನೆ(ಶುಕ್ರವಾರ) ರಾತ್ರಿ 11 ಸುಮಾರಿಗೆ ಆರಂಭವಾದ ಮಳೆ ಇಂದು ಬೆಳಗ್ಗಿನ ಜಾವದವರೆಗೂ ಒಂದೇ ಸುಮನೆ ಸುರಿದಿದೆ. ಭಾರೀ ಮಳೆಯಿಂದ ಕೆಲ ಸಮಯ ಭದ್ರಾ ನದಿ ಅಪಾಯದ ಮಟ್ಟಕ್ಕೆ ಹೋಗಿತ್ತು. ಇದರಿಂದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತಕ್ಕೆ ಕೆಲ ಅಡಿಗಳಷ್ಟು ಬಾಕಿ ಉಳಿದಿತ್ತು. ಇದೀಗ ಮಳೆ ಕಡಿಮೆಯಾದ ಪರಿಣಾಮ ನೀರಿನ ಪ್ರಮಾಣವೂ ಕಡಿಮೆಯಾಗಿದೆ.
ಅಕ್ರಮ ವಲಸಿಗರ ವಿರುದ್ಧ CHIKKAMAGALURU ನಗರಸಭೆ ಸಮರ, ಮನೆ ನೆಲಸಮ
ಈ ಸೇತುವೆ ಮುಳುಗಿದರೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸ ಸಂಪರ್ಕ ಕಡಿತಗೊಳ್ಳಲಿದೆ. ದೇವಸ್ಥಾನಕ್ಕೆ ಹೋಗಲು ಅನ್ಯ ಮಾರ್ಗವಿದ್ದರೂ ಸುಮಾರು 8-10 ಕಿ.ಮೀ. ಸುತ್ತಿಬಳಸಿ ಹೋಗಬೇಕು. ಆ ಮಾರ್ಗವೂ ಕಿರಿದಾದ ರಸ್ತೆಯಾಗಿದ್ದು, ದೊಡ್ಡ ವಾಹನಗಳ ಸಂಚಾರ ಕಷ್ಟದಾಯಕವಾಗಿದೆ. ಈ ಸೇತುವೆಯನ್ನ ಎತ್ತರಿಸಿ ಕೊಡಿ ಎಂದು ಸ್ಥಳಿಯರು ಹತ್ತಾರು ವರ್ಷಗಳಿಂದ ಮನವಿ ಮಾಡಿದರೂ ಸರ್ಕಾರ, ಅಧಿಕಾರಿಗಳು ಯಾರೂ ಸೂಕ್ತವಾಗಿ ಸ್ಪಂದಿಸಿಲ್ಲ. ಪ್ರತಿ ಮಳೆಗಾಲದಲ್ಲೂ ಈ ಸೇತುವೆ ಮುಳುಗಿ ಜನಸಾಮಾನ್ಯರು ತೀವ್ರ ಸಂಕರ್ಷ ಅನುಭವಿಸುತ್ತಿದ್ದಾರೆ. ಒಂದು ಮಳೆಗಾಲಕ್ಕೆ ಕನಿಷ್ಟ 10ಕ್ಕೂ ಹೆಚ್ಚು ಬಾರಿ ಈ ಸೇತುವೆ ಮುಳುಗಲಿದೆ. 2019ರಲ್ಲಿ ನಾಲ್ಕು ದಿನಗಳ ನಿರಂತರವಾಗಿ ಮುಳುಗಿತ್ತು.
ಮಲೆನಾಡಿನಲ್ಲಿ ಸೋನೆ ಮಳೆ
ಮಲೆನಾಡಿನ ಕುದುರೆಮುಖ, ಕೆರೆಕಟ್ಟೆಯ ಕೆಲ ಭಾಗದಲ್ಲಿ ಮಳೆ ಜೋರಾಗಿದ್ದು ಯಾವುದೇ ಅನಾಹುತಗಳು ಸಂಭವಿಸಿಲ್ಲ , ಮಲೆನಾಡಿನ ಭಾಗವಾದ ಕೊಪ್ಪ, ಶೃಂಗೇರಿ, ಮೂಡಿಗೆರೆಯಲ್ಲಿ ಸೋನೆ ಮಳೆ ಸುರಿಯುತ್ತಿದೆ. ಕೆಲಹೊತ್ತು ಜೋರು ಮಳೆ ಬಂದ್ರೆ ಮತ್ತೆ ಸಾಧರಣವಾಗಿ ಮಳೆ ಬರುತ್ತಿದೆ. ಮಲೆನಾಡಿನ ಕೃಷಿ ಚಟುವಟಿಕೆಗೆ ಪೂರಕವಾದಂತಹ ವಾತಾವರಣ ನಿರ್ಮಾಣವಾಗಿದ್ದು ಭತ್ತವನ್ನು ನಾಟಿ ಮಾಡಲು ರೈತರು ಸಿದ್ದತೆಯಲ್ಲಿ ತೊಡಗಿದ್ದಾರೆ.