ಉಗ್ರ ನಿಗ್ರಹದಲ್ಲಿ ಇಬ್ಬಗೆ ನೀತಿ ಬೇಡ: ಚೀನಾಗೆ ಮೋದಿ ಟಾಂಗ್
ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಯೋತ್ಪಾದನೆ ನಿರ್ಮೂಲನೆಗೆ ಜಾಗತಿಕ ಸಹಕಾರದ ಕರೆ ನೀಡಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದೇಶವು ದ್ವಂದ್ವ ನೀತಿ ಅನುಸರಿಸಬಾರದು ಎಂದು ಅವರು ಒತ್ತಿ ಹೇಳಿದರು.
ಕಝಾನ್: ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಜಗತ್ತು ಒಗ್ಗಟ್ಟಿನಿಂದ ಮುನ್ನಡೆಯುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಪ್ರತಿಪಾದಿಸಿದ್ದಾರೆ.
ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗದಲ್ಲಿ ಬುಧವಾರ ಮಾತನಾಡಿದ ಅವರು ‘ಭಯೋತ್ಪಾದನೆಯ ವಿಷಯದಲ್ಲಿ ಯಾವ ದೇಶವೂ ಇಬ್ಬಗೆಯ ನೀತಿಯನ್ನು ಹೊಂದಿರಬಾರದು. ಭಯೋತ್ಪಾದನೆಗೆ ಹಣ ಹರಿಯುವುದನ್ನು ಮೊದಲು ನಿಲ್ಲಿಸಬೇಕು. ಯುವಕರ ತಲೆಕೆಡಿಸಿ ಉಗ್ರವಾದಕ್ಕೆ ಸೆಳೆಯುವುದನ್ನು ತಪ್ಪಿಸಬೇಕು. ವಿಶ್ವಸಂಸ್ಥೆ ಕೂಡ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೈಬರ್ ಸೆಕ್ಯುರಿಟಿ ಬಗ್ಗೆಯೂ ಗರಿಷ್ಠ ಗಮನ ಹರಿಸಬೇಕು’ ಎಂದು ಹೇಳಿದರು.
ಪಾಕಿಸ್ತಾನಿ ಬೆಂಬಲಿತ ಉಗ್ರ ಸಂಘಟನೆಗಳು ಮತ್ತು ಉಗ್ರರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೂಲಕ ಘೋಷಿತ ಅಪರಾಧಿಗಳು ಎಂದು ಘೋಷಿಸುವ ಭಾರತದ ಹಲವು ಪ್ರಸ್ತಾಪಗಳಿಗೆ ಚೀನಾ ವಿಟೋ ಅಧಿಕಾರ ಬಳಸಿ ತಡೆ ನೀಡಿತ್ತು. ಹೀಗಾಗಿ ಮೋದಿ ಹೇಳಿಕೆ ನೇರವಾಗಿ ಚೀನಾ ಉದ್ದೇಶಿಸಿಯೇ ಆಡಿದ್ದು ಎಂದು ವಿಶ್ಲೇಷಿಸಲಾಗಿದೆ.
ಬ್ರಿಕ್ಸ್‌ಗೆ ಹೊಸ ದೇಶಗಳ ಸೇರ್ಪಡೆ:
ಬ್ರಿಕ್ಸ್ ಒಕ್ಕೂಟಕ್ಕೆ ಹೊಸ ದೇಶಗಳನ್ನು ಸೇರಿಸಿಕೊಳ್ಳಲು ಭಾರತದ ಸಹಮತವಿದೆ. ಇದಕ್ಕೆ ಒಮ್ಮತದ ನಿರ್ಧಾರವಾಗಬೇಕು. ಈ ವಿಷಯದಲ್ಲಿ ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯ ರಾಷ್ಟ್ರಗಳ ಅಭಿಪ್ರಾಯವನ್ನು ಗೌರವಿಸಬೇಕು. ಜೋಹಾನ್ಸ್‌ಬರ್ಗ್ ಶೃಂಗದಲ್ಲಿ ಅಂಗೀಕರಿಸಿದ ಮೂಲಭೂತ ತತ್ವಗಳನ್ನು ಎಲ್ಲಾ ದೇಶಗಳೂ ಪಾಲಿಸಬೇಕು ಎಂದು ಹೇಳಿದ ಮೋದಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗಬೇಕು ಎಂದು ಪುನಃ ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ಅನುದಾನ ದುರ್ಬಳಕೆ: 9 ಐಎಎಸ್ ಅಧಿಕಾರಿಗಳ ವಿರುದ್ಧ ಇ.ಡಿ.ಗೆ ಬಿಜೆಪಿ ದೂರು
ಯುದ್ಧಕ್ಕೆ ಭಾರತ ಬೆಂಬಲ ನೀಡಲ್ಲ: ಪ್ರಧಾನಿ ಮೋದಿ
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಯುದ್ಧದ ವಿರುದ್ಧ ಮಾತನಾಡಿದ್ದು, ‘ಭಾರತವು ಯುದ್ಧವನ್ನು ಬೆಂಬಲಿಸುವುದಿಲ್ಲ. ನಾವು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಸಂಘರ್ಷ ಬಗೆಹರಿಸಿಕೊಳ್ಳುವುದನ್ನು ಬೆಂಬಲಿಸುತ್ತೇವೆ’ ಎಂದು ನೇರವಾಗಿ ಹೇಳಿದ್ದಾರೆ. ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗದಲ್ಲಿ ಬುಧವಾರ ಮಾತನಾಡಿದ ಅವರು ರಷ್ಯಾ-ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಬೇಕು ಎಂದು ಪರೋಕ್ಷ ಸಂದೇಶ ರವಾನಿಸಿದರು.
‘ಯುದ್ಧ, ಆರ್ಥಿಕ ಅಸ್ಥಿರತೆ, ಹವಾಮಾನ ಬದಲಾವಣೆ ಹಾಗೂ ಭಯೋತ್ಪಾದನೆಯ ವಿಷಯದಲ್ಲಿ ಬ್ರಿಕ್ಸ್ ರಚನಾತ್ಮಕ ಪಾತ್ರ ನಿಭಾಯಿಸುವ ಮೂಲಕ ಜಗತ್ತನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಲು ಅವಕಾಶವಿದೆ. ನಾವು ಮಾತುಕತೆ ಹಾಗೂ ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ. ಯುದ್ಧವನ್ನು ಬೆಂಬಲಿಸುವುದಿಲ್ಲ. ಎಲ್ಲಾ ದೇಶಗಳೂ ಒಗ್ಗಟ್ಟಿನಿಂದ ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಿದಂತೆ ಬೇರೆ ಸವಾಲುಗಳನ್ನೂ ಎದುರಿಸಿ ಗೆಲ್ಲಲು ಸಾಧ್ಯವಿದೆ’ ಎಂದು ಹೇಳಿದರು. ಮೋದಿ ಮಾತನಾಡುವಾಗ ವೇದಿಕೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದ್ದರು.