ಭೋಪಾಲ್‌(ಡಿ.19): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ದೆಹಲಿಯ ಗಡಿಗಳಲ್ಲಿ ಅಸಂಖ್ಯ ರೈತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 23ನೇ ಕಾಲಿಟ್ಟದಿನವೇ, ಪ್ರಧಾನಿ ನರೇಂದ್ರ ಮೋದಿ ಅವರು ಮೂರೂ ಶಾಸನಗಳನ್ನು ಮತ್ತೊಮ್ಮೆ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳು, ಕೃಷಿ ತಜ್ಞರು ಹಾಗೂ ರೈತರು ಸಹ ಈ ಸುಧಾರಣೆ ಬೇಕೆಂದು ದೀರ್ಘಕಾಲದಿಂದ ಬೇಡಿಕೆ ಇಟ್ಟಿದ್ದರು. ಆದರೆ ಸುಧಾರಣೆಯ ಶ್ರೇಯ ನನಗೆ ಸಿಗುತ್ತೆಂದು ರಾಜಕೀಯ ಪಕ್ಷಗಳು ಈಗ ಅದಕ್ಕೆ ವಿರೋಧ ಮಾಡುತ್ತಿವೆ ಎಂದು ಹರಿಹಾಯ್ದಿದ್ದಾರೆ.

ಇದೇ ವೇಳೆ, ಕಾಯ್ದೆ ವಾಪಸ್‌ಗೆ ಪಟ್ಟು ಹಿಡಿದಿರುವ ರೈತರಿಗೆ ಮತ್ತೆ ಮಾತುಕತೆಗೆ ಬರುವಂತೆ ಮನವಿ ಮಾಡಿದ್ದಾರೆ. ಯಾರಿಗೇ ಆಗಲಿ, ಏನೇ ಕಳವಳ ಇದ್ದರೂ ಶಿರಬಾಗಿ, ಕೈಮುಗಿದು, ವಿನಮ್ರತೆಯಿಂದ ಚರ್ಚಿಸಲು ನಾವು ಸಿದ್ಧವಿದ್ದೇವೆ. ರೈತರ ಜತೆ ಮಾತುಕತೆ ಮಾಡಲು 24 ತಾಸೂ ಸಿದ್ಧ. ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಗೊಳಿಸುತ್ತೇವೆ ಎಂಬುದೆಲ್ಲಾ ಸಾರ್ವಕಾಲಿಕ ಅತಿದೊಡ್ಡ ಸುಳ್ಳು ಎಂದು ಅವರು ಹೇಳಿದ್ದಾರೆ.

ರಾತ್ರೋರಾತ್ರಿ ತಂದಿಲ್ಲ:

ಮಧ್ಯಪ್ರದೇಶದ ರೈತರನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಮಾತನಾಡಿದ ಮೋದಿ, ಹೊಸ ಕೃಷಿ ಕಾಯ್ದೆಗಳು ರಾತ್ರೋರಾತ್ರಿ ಬಂದಿದ್ದಲ್ಲ. ರಾಜಕೀಯ ಪಕ್ಷಗಳು, ಕೃಷಿ ತಜ್ಞರು, ಪ್ರಗತಿಪರ ಕೃಷಿಕರು, ಕೃಷಿ ಸಂಘಟನೆಗಳು ಬಹಳ ಹಿಂದಿನಿಂದಲೂ ಇದಕ್ಕೆ ಬೇಡಿಕೆ ಇಟ್ಟುಕೊಂಡು ಬಂದಿದ್ದವು. ಕಳೆದ 20-22 ವರ್ಷಗಳಿಂದ ಕೇಂದ್ರ, ರಾಜ್ಯ ಸರ್ಕಾರಗಳು ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿವೆ. ಮತ ಪಡೆಯಲು ಚುನಾವಣೆ ಪ್ರಣಾಳಿಕೆಯಲ್ಲಿ ಕೃಷಿ ಸುಧಾರಣೆ ಭರವಸೆ ನೀಡಿದ್ದ ರಾಜಕೀಯ ಪಕ್ಷಗಳು ಈಗ ಏಕೆ ಸುಧಾರಣೆಯನ್ನು ವಿರೋಧಿಸುತ್ತಿವೆ ಎಂಬುದನ್ನು ರೈತರೇ ಕೇಳಬೇಕು ಎಂದು ಸಲಹೆ ಮಾಡಿದರು.

‘ವಿರೋಧ ಪಕ್ಷಗಳು ಈ ಸುಧಾರಣೆಗಳ ಬಗ್ಗೆ ಹೇಳಿದರೂ ಅದನ್ನು ಈಡೇರಿಸಲಿಲ್ಲ. ಇದು ಅವುಗಳ ಆದ್ಯತೆಯೂ ಆಗಿರಲಿಲ್ಲ. ಈಗ ಅವುಗಳ ಸಮಸ್ಯೆ ಏನೆಂದರೆ, ಮೋದಿ ಏಕೆ ಈ ಸುಧಾರಣೆಯ ಶ್ರೇಯ ಪಡೆಯಬೇಕು? ಎಂಬುದು. ನಾನು ಹೇಳುವುದು ಇಷ್ಟೆ. ಆ ಶ್ರೇಯವನ್ನು ನಿಮ್ಮ ಪಕ್ಷಗಳ ಪ್ರಣಾಳಿಕೆಗೇ ಕೊಟ್ಟುಕೊಳ್ಳಿ. ನನಗೆ ಬೇಡ. ನನಗೆ ಬೇಕಿರುವುದು ರೈತರ ಪ್ರಗತಿ ಅಷ್ಟೆ. ಹೀಗಾಗಿ ಈ ವಿಷಯದಲ್ಲಿ ದಾರಿತಪ್ಪಿಸುವುದನ್ನು ನಿಲ್ಲಿಸಿ’ ಎಂದು ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಕ್‌ ಪ್ರಹಾರ ನಡೆಸಿದರು.

ಕನಿಷ್ಠ ಬೆಂಬಲ ಬೆಲೆ ರದ್ದಾಗಲ್ಲ:

ಸ್ವಾಮಿನಾಥನ್‌ ವರದಿಯೇ ಸಾಕು ಈ ಪಕ್ಷಗಳ ಬಣ್ಣ ಬಯಲು ಮಾಡಲು. ಆ ವರದಿ ಬಂದಾಗ 8 ವರ್ಷಗಳ ಕಾಲ ಅದರ ಮೇಲೆ ಪಕ್ಷಗಳು ಕುಳಿತಿದ್ದವು. ರೈತರು ಪ್ರತಿಭಟನೆ ನಡೆಸುತ್ತಿದ್ದರೂ ರಾಜಕೀಯ ಪಕ್ಷಗಳು ತಲೆಕೆಡಿಸಿಕೊಳ್ಳಲಿಲ್ಲ. ರೈತರಿಗೆ ಹೆಚ್ಚು ಹಣ ಕೊಡುವುದು ರಾಜಕೀಯ ಪಕ್ಷಗಳಿಗೆ ಇಷ್ಟವಿರಲಿಲ್ಲ. ಆದರೆ ನಮ್ಮ ಸರ್ಕಾರ ರೈತರನ್ನು ಅನ್ನದಾತರಂತೆ ಕಾಣುತ್ತದೆ. ಹೀಗಾಗಿ ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸಿ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಅಧಿಕ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿದೆ ಎಂದು ಹೇಳಿದರು.

ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಸರ್ಕಾರ ಗಂಭೀರವಾಗಿದೆ. ಬಿತ್ತನೆಗೂ ಮುನ್ನವೇ ಅದನ್ನು ಘೋಷಣೆ ಮಾಡುತ್ತಿದೆ. ಹೊಸ ಕೃಷಿ ಕಾಯ್ದೆ ಜಾರಿಯಾಗಿ ಆರು ತಿಂಗಳಾಗಿದೆ. ಕೊರೋನಾ ಕಾಲದಲ್ಲೂ ಕನಿಷ್ಠ ಬೆಂಬಲ ಬೆಲೆಯಡಿ ಉತ್ಪನ್ನ ಖರೀದಿಸಲಾಗಿದೆ. ರೈತರು ಹಿಂದೆ ಎಲ್ಲಿ ಮಾರಾಟ ಮಾಡುತ್ತಿದ್ದರೂ ಅದೇ ಎಪಿಎಂಸಿ ಮಾರುಕಟ್ಟೆಗಳಲ್ಲೇ ಖರೀದಿ ಪ್ರಕ್ರಿಯೆ ನಡೆದಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ರದ್ದುಗೊಳಿಸಲಾಗುತ್ತದೆ ಎಂಬುದನ್ನು ಯಾರೂ ಒಪ್ಪುವುದಿಲ್ಲ. ಇದಕ್ಕಿಂತ ದೊಡ್ಡ ಸುಳ್ಳು ಹಾಗೂ ಸಂಚು ಮತ್ತೊಂದಿಲ್ಲ. ಎಂಎಸ್‌ಪಿ ಮುಂದುವರಿಯುತ್ತದೆ ಎಂದರು.

ರೈತರ ಆತಂಕಕ್ಕೆ ಮೋದಿ ಸ್ಪಷ್ಟನೆ

1. ಆತಂಕ: ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುತ್ತೆ

ಮೋದಿ ಸ್ಪಷ್ಟನೆ: ಕಾಯ್ದೆ ಬಂದು 6 ತಿಂಗಳಾಗಿದೆ. ಆದರೂ ಬೆಂಬಲ ಬೆಲೆ ರದ್ದಾಗಿಲ್ಲ. ಕೊರೋನಾ ಕಾಲದಲ್ಲೂ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಸಲಾಗಿದೆ. ಹಿಂದೆಯೂ ಬೆಂಬಲ ಬೆಲೆ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ.

2. ಆತಂಕ: ಎಪಿಎಂಸಿಗಳನ್ನು ಮುಚ್ಚಲಾಗುತ್ತದೆ

ಮೋದಿ ಸ್ಪಷ್ಟನೆ: ಎಪಿಎಂಸಿಗಳಲ್ಲಿ ಮಾರಲು ರೈತರು ಈಗಲೂ ಸ್ವತಂತ್ರರು. ಒಂದು ಮಂಡಿಯನ್ನೂ ಮುಚ್ಚಿಲ್ಲ. ಆಧುನೀಕರಣಕ್ಕೆ 500 ಕೋಟಿ ನೀಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ವರ್ಷ ಎಪಿಎಂಸಿಗಳ ಮೂಲಕ ಖರೀದಿ ನಡೆದಿದೆ.

3. ಆತಂಕ: ಕಾರ್ಪೋರೆಟ್‌ ಕಂಪನಿಗಳಿಗೆ ಅನುಕೂಲವಾಗುತ್ತದೆ

ಮೋದಿ ಸ್ಪಷ್ಟನೆ: ಖಾಸಗಿ ಸಂಸ್ಥೆಗಳು ಹಾಗೂ ರೈತರ ನಡುವಣ ಒಪ್ಪಂದ ಹಿಂದೆಯೂ ಇತ್ತು. ಈಗ ಅದನ್ನು ಇನ್ನಷ್ಟುರೈತ ಪರವಾಗಿ ಸುಧಾರಿಸಲಾಗಿದೆ. ಇಂಥ ಒಪ್ಪಂದ ಕೇವಲ ಐಚ್ಛಿಕ. ರೈತರು ಬಯಸಿದರೆ ಮಾತ್ರ ಮಾಡಿಕೊಳ್ಳಬಹುದು. ಒಂದು ವೇಳೆ ಸಂಸ್ಥೆಗಳು ಒಪ್ಪಂದ ಮುರಿದರೆ ಭಾರೀ ದಂಡ ಕಟ್ಟಬೇಕು, ಆದರೆ ರೈತರು ಯಾವುದೇ ಸಮಯದಲ್ಲಿ ಒಪ್ಪಂದದಿಂದ ಹಿಂದೆ ಸರಿಯಬಹುದು. ಒಂದು ವೇಳೆ ಮಾರುಕಟ್ಟೆಯಲ್ಲಿ ಬೆಳೆಗೆ ಬಂಪರ್‌ ದರ ಸಿಕ್ಕರೆ, ಒಪ್ಪಂದದ ದರದ ಜೊತೆಗೆ ಹೆಚ್ಚುವರಿ ಮೊತ್ತವನ್ನು ಕಂಪನಿಗಳು ರೈತರಿಗೆ ನೀಡಬೇಕಾಗುತ್ತದೆ. ಒಪ್ಪಂದ ಕೇವಲ ಬೆಳೆಗೇ ಹೊರತೂ, ರೈತರ ಜಮೀನಿಗಲ್ಲ. ಹೀಗಾಗಿ ಜಮೀನು ಸಂಸ್ಥೆಗಳ ಪಾಲಾಗುವ ಮಾತೇ ಇಲ್ಲ.