"

ನವದೆಹಲಿ[ನ.20]: ಕೇಂದ್ರ ಕೈಗಾರಿಕಾ ಭದ್ರತಾ ಪಡೆ[CISF]ಯಲ್ಲಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶ್ವಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸೇವೆಯಿಂದ ನಿವೃತ್ತಿಗೊಳಿಸಲಾಯ್ತು. 

ಮಂಗಳವಾರದಂದು ಶಾಸ್ತ್ರೀ ಪಾರ್ಕ್ ಮೆಟ್ರೋ ಸ್ಟೇಷನ್ ಬಳಿ, ಪ್ರಾಕೃತ ಪಾರ್ಕ್ ನಲ್ಲಿ ನಡೆದ ಸಮಾರಂಭದಲ್ಲಿ ಸೇವೆಯ ಕೊನೆಯ ದಿನದಂದು ಶ್ವಾನಗಳಿಗೆ ಸೆಲ್ಯೂಟ್ ಹಾಗೂ ಗೌರವದೊಂದಿಗೆ ಓರ್ವ ಸೈನಿಕನಂತೆ ಬೀಳ್ಕೊಡಲಾಯ್ತು. ಶ್ವಾನಗಳ ನಿವೃತ್ತಿ ಕುರಿತಾಗಿ CISF ಟ್ವೀಟ್ ಮಾಡಿದ್ದು, 'ಶ್ವಾನಗಳಾಗಿ ಜನಿಸಿದರೂ, ಸೈನಿಕರಂತೆ ನಿವೃತ್ತಿ' ಎಂದು ಬರೆದಿದೆ. ಇದರೊಂದಿಗೆ ಕೆಲ ಫೋಟೋಗಳನ್ನೂ ಶೇರ್ ಮಾಡಿಕೊಂಡಿದೆ. 

ಈ ಶ್ವಾನಗಳು ದೆಹಲಿ ಮೆಟ್ರೋ ವಿಭಾಗದ CISF ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಹೀಗಾಗಿ ದೆಹಲಿ ಮೆಟ್ರೋ CISF ವಿಭಾಗ ಆಯೋಜಿಸಿದ್ದ ಈ ಸಮಾರಂಭದಲ್ಲಿ ಶ್ವಾನಗಳಿಗೆ ಸ್ಮರಣಿಕೆ, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ. ಇನ್ನು ವಿಭಾಗವೊಂದು ಶ್ವಾನಗಳ ನಿವೃತ್ತಿಗಾಗಿ ಇಂತಹ ವಿಶೇಷ ಹಾಗೂ ಅದ್ಧೂರಿ ವಿದಾಯ ಕೂಟ ಆಯೋಜಿಸಿದ್ದು ಇದೇ ಮೊದಲು. 

ಸಮಾರಂಭದಲ್ಲಿ ಪಾಲ್ಗೊಂಡವರೆಲ್ಲರೂ ಭಾವುಕ

ಈ ಕುರಿತು ಪ್ರತಿಕ್ರಿಯಿಸಿದ CISF ಅಧಿಕಾರಿಯೊಬ್ಬರು 'ಕೈನಾ- ಹೀನಾ, ವೀರ್, ಪತಂಗ್, ಜೆಲಿ, ಜೆಸ್ಸೀ, ಲೂಸಿ ಹಾಗೂ ಲವ್ಲೀ ಇವರೆಲ್ಲರನ್ನೂ ದೆಹಲಿಯ NGO ಒಂದರಿಂದ ಪಡೆದುಕೊಂಡಿದ್ದೆವು' ಎಂದಿದ್ದಾರೆ.

ಇನ್ನು ಲ್ಯಾಬ್ರಡೋರ್ ನಾಯಿ ಲವ್ಲಿಯನ್ನು ನೋಡಿಕೊಳ್ಳುತ್ತಿದ್ದ ಕಾನ್ಸ್ಟೇಬಲ್ ವಿಜಯ್ ಕುಮಾರ್ ಮಾತನಾಡುತ್ತಾ 'ಲವ್ಲಿ ನೆನಪು ಯಾವತ್ತೂ ನನ್ನನ್ನು ಕಾಡಲಿದೆ. ಯಾಕೆಂದರೆ ಕಳೆದ 10 ವರ್ಷಗಳಿಂದ ಅದು ನನ್ನ ಜೀವನದ ಭಾಗವಾಗಿತ್ತು. ಇತರ ಶ್ವಾನಗಳಿಗೆ ಹೋಲಿಸಿದರೆ ಅದು ಅತ್ಯಂತ ಶಾಂತ ಹಾಗೂ ಸಂವೇದನಾಶೀಲವಾಗಿತ್ತು' ಎಂದು ಭಾವುಕರಾಗಿದ್ದಾರೆ.

ಚೆನ್ನೈ ರೈಲು ನಿಲ್ದಾಣದಲ್ಲಿ ಎಚ್ಚರಿಕೆ ನೀಡುತ್ತೆ ಈ ಶ್ವಾನ!

ದ್ಧೂರಿ ವಿದಾಯಕೂಟ ಏಕೆ ಎಂಬುವುದಕ್ಕೆ ಉತ್ತರಿಸಿದ ಅಧಿಕಾರಿಯೊಬ್ಬರು 'ಏಳು ಶ್ವಾನಗಳ ತಂಡವೊಂದು ಒಂದೇ ಬಾರಿ ನಿವೃತ್ತಿಯಾಗುತ್ತಿರುವುದು ಇದೇ ಮೊದಲು. ಅಲ್ಲದೇ ನಾವು ಅವುಗಳಿಗೆ ಒಂದು ಮರೆಯಲಾಗದ ವಿದಾಯ ಕೂಟ ನೀಡ ಬಯಸಿದ್ದೆವು. ನಾವು ಅವುಗಳ ನಿಷ್ಠೆ, ಭಕ್ತಿ, ನಿಸ್ವಾರ್ಥ ಹಾಗೂ ವಿಶ್ವಾಸಾರ್ಹ ಸೇವೆಗೆ ಚಿರಋಣಿ' ಎಂದಿದ್ದಾರೆ.

ವಿದಾಯ ಕೂಟ ಸಮಾರಂಭದಲ್ಲಿ ನೆರೆದಿದ್ದ ಬಹುತೇಕ ಎಲ್ಲರ ಕಣ್ಣುಗಳು ತೇವಗೊಂಡಿದ್ದು, ಎಲ್ಲಾ ಅಧಿಕಾರಿಗಳ ಮುಖದಲ್ಲಿ ನೋವು ಕಂಡು ಬಂದಿತ್ತು. ಇನ್ನು ಶ್ವಾನಗಳಿಗೆ ಅತ್ಯಂತ ಪ್ರಿಯವಾಗಿದ್ದ ಕೇಕ್ ನೀಡಿ, ರೆಡ್ ಕಾರ್ಪೆಟ್ ಮೇಲೆ ನಡೆಸಿ ವಿದಾಯ ಕೋರಲಾಯ್ತು.

ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಶ್ವಾನ