ಯಾತ್ರಿಗಳ ಅನುಕೂಲಕ್ಕಾಗಿ ಪವಿತ್ರ ಅಮರನಾಥ ಗುಹೆಗೆ ರಸ್ತೆ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಇದು ಜನ ಸೇವೆಗೆ ಲಭ್ಯವಾಗಲಿದೆ ಎಂದು ಗಡಿ ರಸ್ತೆ ಪ್ರಾಧಿಕಾರ ಹೇಳಿದೆ.

ಶ್ರೀನಗರ: ಯಾತ್ರಿಗಳ ಅನುಕೂಲಕ್ಕಾಗಿ ಪವಿತ್ರ ಅಮರನಾಥ ಗುಹೆಗೆ ರಸ್ತೆ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಇದು ಜನ ಸೇವೆಗೆ ಲಭ್ಯವಾಗಲಿದೆ ಎಂದು ಗಡಿ ರಸ್ತೆ ಪ್ರಾಧಿಕಾರ ಹೇಳಿದೆ. ಸಮುದ್ರ ಮಟ್ಟದಿಂದ ಸುಮಾರು 3888 ಮೀ. ಎತ್ತರದಲ್ಲಿರುವ ಈ ಗುಹೆಯ ಹಾದಿಯಲ್ಲಿ ಈಗಾಗಲೇ ಗಡಿ ರಸ್ತೆ ಪ್ರಾಧಿಕಾರ ರಸ್ತೆ (Border Road Authority) ಅಗಲೀಕರಣ ಕಾರ್ಯವನ್ನು ಆರಂಭಿಸಿದೆ. ಬಾಲ್ಟಾಲ್‌ವರೆಗೆ ಬಹುಪಾಲು ರಸ್ತೆ ನಿರ್ಮಾಣವಾಗಿದೆ. ಸಣ್ಣ ಟ್ರಕ್‌ ಮತ್ತು ಇತರ ವಾಹನಗಳನ್ನು ಬಳಸಿಕೊಂಡು ಗುಹೆವರೆಗೂ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಅಲ್ಲದೇ ಚಂದನ್ಬಾರಿ (Chandanbari) ಕಡೆಯಿಂದ ಅಮರನಾಥಕ್ಕೆ ಹೋಗುವ ದಾರಿಯಲ್ಲಿ ಶೇಷನಾಗ್‌ (Seshnag) ಮತ್ತು ಪಂಚತಾರಿಣಿ ನಡುವೆ ಸುಮಾರು 10.8 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಲು ಸಹ ಯೋಜಿಸಲಾಗಿದೆ. ಇದರಿಂದಾಗಿ ಹವಾಮಾನ ವೈಪರೀತ್ಯದ ಸಮಯದಲ್ಲೂ ಯಾತ್ರಿಗಳು ಸುರಕ್ಷಿತವಾಗಿ ಮತ್ತು ತಡೆಯಿಲ್ಲದೇ ಅಮರನಾಥ ಯಾತ್ರೆ ಕೈಗೊಳ್ಳಬಹುದಾಗಿದೆ. ಇದರೊಂದಿಗೆ ಪಂಚತಾರಿಣಿಯಿಂದ ಗುಹೆಯವರೆಗೆ 5 ಕಿ.ಮೀ. ಉದ್ದದ ಮತ್ತು ಐದುವರೆ ಮೀ. ಅಗಲದ ರಸ್ತೆ ನಿರ್ಮಾಣ ಸಹ ಮಾಡಲಾಗುತ್ತದೆ.

ಕ್ರಿಕೆಟ್‌ ಆಡುತ್ತಿದ್ದ ಪೊಲೀಸ್‌ ಮೇಲೆ ಉಗ್ರರ ಗುಂಡಿನ ದಾಳಿ

ಶ್ರೀನಗರ: ಕ್ರಿಕೆಟ್ ಆಡುತ್ತಿದ್ದ ಜಮ್ಮು ಕಾಶ್ಮೀರ ಪೊಲೀಸ್‌ (Jammu and Kashmir) ಅಧಿಕಾರಿಯೊಬ್ಬರ ಮೇಲೆ ಭಯೋತ್ಪಾದಕನೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ಶ್ರೀನಗರ ಸಮೀಪ ಭಾನುವಾರ ನಡೆದಿದೆ. ಮಸ್ರೂರ್‌ ಅಹ್ಮದ್‌ ವಾನಿ ಇಲ್ಲಿನ ಈದ್ಗಾ ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಬಂದ ಭಯೋತ್ಪಾದಕ ಅಹ್ಮದ್‌ರನ್ನು ಗುರಿಯಾಗಿಸಿಕೊಂಡು ಕಣ್ಣು, ಹೊಟ್ಟೆ ಹಾಗೂ ಕೈ ಮೇಲೆ ಗುಂಡಿನ ದಾಳಿ ನಡೆಸಿದ. ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದಾಳಿಯ ಹೊಣೆಯನ್ನು ಲಷ್ಕರ್‌ ಎ ತೊಯ್ಬಾದ (Lashkar-e-Taiba) ಅಂಗ ಸಂಸ್ಥೆ ರೆಸಿಸ್ಟೆನ್ಸ್‌ ಫ್ರಂಟ್‌ ಹೊತ್ತುಕೊಂಡಿದೆ.

ಛತ್ತೀಸ್‌ಗಢ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 10 ಸಾವಿರ ರು.: ರಾಹುಲ್‌ ಘೋಷಣೆ

ರಾಜನಂದಗಾಂವ್‌ (ಛತ್ತೀಸ್‌ಗಢ): ವಿಧಾನಸಭೆ ಚುನಾವಣೆ ನಿಮಿತ್ತ ಆಡಳಿತಾರೂಢ ಕಾಂಗ್ರೆಸ್‌ ಭಾನುವಾರ ಮತ್ತಷ್ಟು ಬಂಪರ್‌ ಭರವಸೆಗಳನ್ನು ಪ್ರಕಟಿಸಿದೆ. ಗ್ರಾಮೀಣ ಕೃಷಿ ಕಾರ್ಮಿಕರಿಗೆ ವಾರ್ಷಿಕ 7 ಸಾವಿರ ರು. ಬದಲಾಗಿ 10 ಸಾವಿರ ರು. ಹಾಗೂ ರಾಜ್ಯದ ಬಡವರ ಆರೋಗ್ಯ ವಿಮಾ ಸೌಲಭ್ಯವನ್ನು 5 ಲಕ್ಷ ರು. ಬದಲಾಗಿ 10 ಲಕ್ಷ ರು.ಗೆ ಹೆಚ್ಚಸುವುದಾಗಿ ಘೋಷಿಸಿದೆ. ಛತ್ತೀಸ್‌ಗಢ ಪ್ರವಾಸದಲ್ಲಿರುವ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ರಾಜನಂದಗಾಂವ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಈ ಘೋಷಣೆ ಮಾಡಿದರು. ಛತ್ತೀಸ್‌ಗಢದಲ್ಲಿ ಹಾಲಿ ಭೂಪೇಶ್‌ ಬಘೇಲ್‌ ಸರ್ಕಾರ ಗ್ರಾಮೀಣ ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ 7 ಸಾವಿರ ರು. ಹಾಗೂ ಬಡವರಿಗೆ ಆರೋಗ್ಯ ವಿಮೆ ರೂಪದಲ್ಲಿ 5 ಲಕ್ಷ ರು. ನೀಡುತ್ತಿತ್ತು.