* ಕೋವಿಡ್‌ನಿಂದ ಗುಣಮುಖ ಬಳಿಕ ಮೂಳೆಯ ಅಂಗಾಂಶಗಳ ಸಾವು!* ಮುಂಬೈನಲ್ಲಿ ಇಂಥ 3 ಪ್ರಕರಣ ಪತ್ತೆ * ಮೂಳೆ ಅಂಗಾಂಶ ಸತ್ತರೆ ತೊಡೆ, ಸೊಂಟ ನೋವು* ಕೂಡಲೇ ಚಿಕಿತ್ಸೆಗೆ ಒಳಗಾದರೆ ಸಮಸ್ಯೆ ನಿವಾರಣೆ* ತಡ ಮಾಡಿದರೆ ಶಾಶ್ವತ ಅಂಗವೈಕಲ್ಯ
ಮುಂಬೈ(ಜು.06): ಬ್ಲಾಕ್ ಫಂಗಸ್ ಹಾಗೂ ಗುದನಾಳ ರಕ್ತಸ್ರಾವದ ಬಳಿಕ ಕೋವಿಡ್‌ನಿಂದ ಗುಣಮುಖ ಆದವರಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದೆ. ಕೆಲವು ಗುಣಮುಖರಲ್ಲಿ ಮೂಳೆಯ ಅಂಗಾಂಶಗಳು ಸತ್ತುಹೋಗುವ ಭೀತಿ ಸೃಷ್ಟಿಯಾಗಿದ್ದು, ಮುಂಬೈನಲ್ಲಿ 3 ಪ್ರಕರಣಗಳು ಪತ್ತೆ ಆಗಿವೆ.
ಮೂಳೆಯ ಅಂಗಾಂಶಗಳು ಸತ್ತುಹೋಗುವುದು ಮಾರಣಾಂತಿಕವೇನೂ ಅಲ್ಲ. ಆದರೆ ಇದರಿಂದ ತೊಡೆಯ ಮೂಳೆ ಸೇರಿದಂತೆ ದೇಹದ ಕೆಲವು ಮಹತ್ವದ ಭಾಗಗಳ ಮೂಳೆಗಳು ಸತ್ವ ಕಳೆದುಕೊಂಡು ಅಂಥ ವ್ಯಕ್ತಿ ಶಾಶ್ವತ ಅಂಗವೈಕಲ್ಯಕ್ಕೆ ಈಡಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಮುಂಬೈ ಮಾಹಿಂ ಪ್ರದೇಶದ ಹಿಂದೂಜಾ ಆಸ್ಪತ್ರೆಯಲ್ಲಿ 40 ವರ್ಷ ಮೇಲ್ಪಟ್ಟಇಂಥ ಮೂವರು ರೋಗಿಗಳು ಕೋವಿಡ್‌ನಿಂದ ಗುಣಮುಖರಾದ 2 ತಿಂಗಳ ಬಳಿಕ ಮೂಳೆಯ ಅಂಗಾಂಶ ಸತ್ತು ಹೋಗುವ ಸಮಸ್ಯೆಯಿಂದ ದಾಖಲಾಗಿದ್ದರು. ಇವರಿಗೆ ತೊಡೆಯ ಮೂಳೆಯ ಅಂಗಾಂಶ ಸತ್ತುಹೋಗಿತ್ತು. ಆದರೆ ಇವರು ವೈದ್ಯರಾಗಿದ್ದ ಕಾರಣ ಆರಂಭಿಕ ಹಂತದಲ್ಲೇ ಮೂಳೆ ಸಮಸ್ಯೆ ಅರಿವಿಗೆ ಬಂದಿತ್ತು. ಹೀಗಾಗಿ ಇವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಯಿತು ಎಂದು ಹಿಂದೂಜಾ ಆಸ್ಪತ್ರೆಯ ನಿರ್ದೇಶಕ ಡಾ| ಸಂಜಯ ಅಗರ್‌ವಾಲಾ ಹೇಳಲಿದ್ದಾರೆ.
ಸ್ಟಿರಾಯ್ಡ್ ಕಾರಣ:
ಕೋವಿಡ್ ಸೋಂಕಿತರಿಗೆ ಸ್ಟಿರಾಯ್ಡ್ ಔಷಧ ಅಗತ್ಯ ಇರುತ್ತದೆ. ಈ ಸ್ಟಿರಾಯ್ಡ್‌ನಿಂದಲೇ ಕೆಲವರಿಗೆ ಮೂಳೆಯ ಅಂಗಾಂಶದ ಸಾವು ಸಂಭವಿಸುತ್ತದೆ ಎಂದು ಅವರು ಹೇಳಿದ್ದಾರೆ. ಕೋವಿಡ್ ತಾರಕಕ್ಕೆ ಏರಿದ್ದು ಏಪ್ರಿಲ್-ಮೇ ತಿಂಗಳಲ್ಲಿ. ಗುಣವಾದ 2 ತಿಂಗಳ ನಂತರ ಇಂಥ ಸಮಸ್ಯೆ ಆಗಬಹುದು. ಹೀಗಾಗಿ ಮುಂಬರುವ ದಿನಗಳಲ್ಲಿ, ಮತ್ತಷ್ಟುಇಂಥ ಪ್ರಕರಣ ದಾಖಲಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಲಕ್ಷಣ ಏನು? ಪರಿಹಾರ ಏನು?:
ಮೂಳೆಗೆ ರಕ್ತ ಪೂರೈಕೆ ನಿಲ್ಲುತ್ತಿದ್ದಂತೆಯೇ ಮೂಳೆಯ ಅಂಗಾಂಶ ಸಾಯುತ್ತದೆ. ಮೂಳೆಯ ಅಂಗಾಂಶ ಸಾವು ಆದೊಡನೆಯೇ ಸಾಮಾನ್ಯವಾಗಿ ಸೊಂಟ ಹಾಗೂ ತೊಡೆ ನೋವು ಕಾಣಿಸುತ್ತದೆ. ಕೂಡಲೇ ಎಂಆರ್‌ಐ ಸ್ಕಾನ್ ಮಾಡಿಸಿ ಇಂಥವರು ಚಿಕಿತ್ಸೆ ಪಡೆಯಬೇಕು. ಇದರಿಂದ ಅವರು ಸಮಸ್ಯೆಯಿಂದ ದೂರವಾಗುತ್ತಾರೆ. ಇಲ್ಲದಿದ್ದರೆ ಹಿಪ್ ರಿಪ್ಲೇಸ್‌ಮೆಂಟ್ ಸರ್ಜರಿಯಂಥ ಶಸ್ತ್ರಕ್ರಿಯೆ ಇವರಿಗೆ ಅಗತ್ಯವಾಗುತ್ತದೆ. ತಡವಾದರೆ ಶಾಶ್ವತ ಅಂಗವೈಕಲ್ಯಕ್ಕೆ ಇವರು ತುತ್ತಾಗಬಹುದು ಎಂದು ತಜ್ಞರು ಹೇಳಿದ್ದಾರೆ.
