ಮಹಿಳಾ ಸಹೋದ್ಯೋಗಿಯ ಎದೆಯನ್ನು ದಿಟ್ಟಿಸಿ ನೋಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್ ಅನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಕಚೇರಿಯಲ್ಲಿ ನಡೆದ ಈ ಘಟನೆಯು 'ದುರ್ನಡತೆ' ಎನಿಸಿದರೂ, ಕಾನೂನಿನ ಪ್ರಕಾರ ಇದನ್ನು 'ವಾಯುರಿಸಂ' (ಸೆಕ್ಷನ್ 354-C) ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮುಂಬೈ (ಏ.10): ಖಾಸಗಿ ವಿಮಾ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತನ್ನ ಮಹಿಳಾ ಸಹೋದ್ಯೋಗಿಯ ಎದೆಯನ್ನು ದಿಟ್ಟಿಸಿ ನೋಡುತ್ತಿದ್ದರು ಎಂಬ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಇಂತಹ ವರ್ತನೆಯು "ದುರ್ನಡತೆ ಮತ್ತು ಅಸಭ್ಯತೆ" ಎನಿಸಿಕೊಳ್ಳಬಹುದೇ ಹೊರತು, ಇದನ್ನು ಕಾನೂನಿನ ಪ್ರಕಾರ 'ವಾಯುರಿಸಂ' (ಕಾಮಪ್ರಚೋದಿತ ನೋಟ) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Add Asianetnews Kannada as a Preferred SourcegooglePreferred

ಏನಿದು ಪ್ರಕರಣ?

ಖಾಸಗಿ ವಿಮಾ ಕಂಪನಿಯೊಂದರಲ್ಲಿ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಆಗಿದ್ದ ವ್ಯಕ್ತಿಯ ವಿರುದ್ಧ 2014ರಲ್ಲಿ ಈ ದೂರು ದಾಖಲಾಗಿತ್ತು. ಮಹಿಳಾ ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ನೀಡಿದ ದೂರಿನ ಪ್ರಕಾರ, ಆರೋಪಿಯು ಕಣ್ಣಿಗೆ ಕಣ್ಣಿಟ್ಟು ಮಾತನಾಡುವ ಬದಲಿಗೆ ಸದಾ ತನ್ನ ಎದೆಯ ಭಾಗವನ್ನು ದಿಟ್ಟಿಸುತ್ತಿದ್ದರು ಮತ್ತು ಅಸಭ್ಯ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದಿದ್ದಾಗ, ಆರೋಪಿಯು ಆಕೆಯ ಕೆಲಸದಲ್ಲಿ ತಪ್ಪು ಹುಡುಕಲು ಆರಂಭಿಸಿ, ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರು. ಕೊನೆಗೆ ಕಂಪನಿಯು ಆಕೆಗೆ ಕೆಲಸದಿಂದ ತೆಗೆದುಹಾಕುವ ನೋಟಿಸ್ ನೀಡಿದಾಗ ಆಕೆ ಬೊರಿವಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನ್ಯಾಯಾಲಯದ ವಾದವೇನು?

ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-C ಪ್ರಕಾರ, ಒಬ್ಬ ಮಹಿಳೆ ತನ್ನ ಖಾಸಗಿ ಕೆಲಸಗಳಲ್ಲಿ ತೊಡಗಿರುವಾಗ (Private Act), ಯಾರೂ ನೋಡುತ್ತಿಲ್ಲ ಎಂಬ ಭರವಸೆಯಲ್ಲಿರುವಾಗ ಅವಳನ್ನು ಗುಟ್ಟಾಗಿ ನೋಡುವುದು ಅಥವಾ ಚಿತ್ರೀಕರಿಸುವುದು ಶಿಕ್ಷಾರ್ಹ ಅಪರಾಧ. ಆದರೆ ಇಲ್ಲಿ ಘಟನೆ ನಡೆದದ್ದು ಕಚೇರಿಯ ಸಭೆಗಳಲ್ಲಿ (Public/Office Setting), ಹಾಗಾಗಿ ಇದು ಈ ಸೆಕ್ಷನ್ ಅಡಿಯಲ್ಲಿ ಬರುವುದಿಲ್ಲ. ಅಲ್ಲದೆ, ಇದು ವಾಯುರಿಸಂ ಕೂಡ ಅನಿಸಿಕೊಳ್ಳೋದಿಲ್ಲ.

"ಕೇವಲ ದಿಟ್ಟಿಸಿ ನೋಡುವುದು ಎಷ್ಟು ಕೆಟ್ಟದ್ದಾಗಿದ್ದರೂ, ಅದು ವಾಯುರಿಸಂ ಆಗುವುದಿಲ್ಲ. ಕಾನೂನಿನ ಪದಗಳನ್ನು ಅದರ ಅರ್ಥಕ್ಕಿಂತ ಹೆಚ್ಚು ವಿಸ್ತರಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಧೀಶರು ತಿಳಿಸಿದರು. ಮಹಿಳೆಯರ ವಿರುದ್ಧದ ಪ್ರತಿಯೊಂದು ಕೆಟ್ಟ ನಡವಳಿಕೆ ಅಥವಾ ಅಸಭ್ಯ ನೋಟವನ್ನು ಶಿಕ್ಷಿಸಲು ಸೆಕ್ಷನ್ 354-C ಎಂಬುದು ಸಾಮಾನ್ಯ ನಿಬಂಧನೆಯಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಕೆಲಸದ ಸ್ಥಳದ ದೂರು ಕ್ರಿಮಿನಲ್ ಅಪರಾಧವಲ್ಲ

ಆರೋಪಿ ಪರ ವಕೀಲ ಅಮೋಲ್ ಪಟಾಂಕರ್ ಅವರು ವಾದ ಮಂಡಿಸಿ, "ಕಂಪನಿಯ ಆಂತರಿಕ ದೂರು ಸಮಿತಿಯು (ICC) ಈಗಾಗಲೇ ತನಿಖೆ ನಡೆಸಿ ಆರೋಪಿಯನ್ನು ದೋಷಮುಕ್ತಗೊಳಿಸಿದೆ" ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸಿದ ನ್ಯಾಯಮೂರ್ತಿಗಳು, "ಕೆಲಸದ ಸ್ಥಳದ ಪ್ರತಿಯೊಂದು ಸಣ್ಣಪುಟ್ಟ ದೂರುಗಳನ್ನು ವಾಯುರಿಸಂನಂತಹ ಕ್ರಿಮಿನಲ್ ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ" ಎಂದರು.

"ದೂರುದಾರ ಮಹಿಳೆಗೆ ಇದರಿಂದ ಅವಮಾನ ಮತ್ತು ಸಂಕಟವಾಗಿರಬಹುದು, ಕಚೇರಿಯ ವಾತಾವರಣವು ಅಹಿತಕರವಾಗಿರಬಹುದು ಎಂಬುದು ನಿಜ. ಆದರೆ ಕ್ರಿಮಿನಲ್ ಪ್ರಾಸಿಕ್ಯೂಷನ್ ಮುಂದುವರಿಯಬೇಕಾದರೆ ಅಲ್ಲಿ ಮಹಿಳೆಯ ಖಾಸಗಿ ಕೃತ್ಯಗಳನ್ನು ನೋಡಿರುವುದು ಅಥವಾ ರೆಕಾರ್ಡ್ ಮಾಡಿರುವುದು ಅತ್ಯಗತ್ಯ. ಈ ಪ್ರಕರಣದಲ್ಲಿ ಅಂತಹ ಯಾವುದೇ ಅಂಶಗಳಿಲ್ಲದ ಕಾರಣ, ಈ ಕ್ರಿಮಿನಲ್ ಪ್ರಕ್ರಿಯೆಯನ್ನು ಮುಂದುವರಿಸುವುದು ಕಾನೂನುಬಾಹಿರ" ಎಂದು ಹೇಳಿ ನ್ಯಾಯಾಲಯವು ಎಫ್‌ಐಆರ್ ರದ್ದುಗೊಳಿಸಿತು.