ನ್ಯೂಯಾರ್ಕ್(ಜ.30): ಭಾರತ ಹಾಗೂ ಚೀನಾ ಗಡಿಯಲ್ಲಿ ಯುದ್ಧ ಸದೃಶ ವಾತಾವರಣ ಮುಂದುವರಿದಿರುವಾಗಲೇ, ಭಾರತೀಯ ವಾಯುಪಡೆಗೆ ಎಫ್‌-15ಎಕ್ಸ್‌ ಮಲ್ಟಿರೋಲ್‌ ಯುದ್ಧ ವಿಮಾನಗಳನ್ನು ನೀಡಲು ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ರಫೇಲ್‌ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸಿರುವ ಭಾರತಕ್ಕೆ ಇದೀಗ ಎಫ್‌-15ಎಕ್ಸ್‌ ಯುದ್ಧ ವಿಮಾನಗಳೂ ಲಭಿಸಿದರೆ ಚೀನಾ ವಿರುದ್ಧ ಕೈ ಮತ್ತಷ್ಟುಮೇಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಫ್‌-15ಎಕ್ಸ್‌ ಮಲ್ಟಿರೋಲ್‌ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ನೀಡಲು ಅಮೆರಿಕ ಸರ್ಕಾರದಿಂದ ಅನುಮತಿ ಲಭಿಸಿದೆ ಎಂದು ಬೋಯಿಂಗ್‌ ಕಂಪನಿಯ ಯುದ್ಧ ವಿಮಾನ ಮಾರಾಟ ವಿಭಾಗದ ಮುಖ್ಯಸ್ಥ ಅಂಕುರ್‌ ಕಣಗಲೇಕರ್‌ ಅವರು ತಿಳಿಸಿದ್ದಾರೆ.

ಎಫ್‌-15ಎಕ್ಸ್‌ ವಿಮಾನವನ್ನು ಫೆಬ್ರವರಿ ಮೊದಲ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಏರ್‌ ಶೋ ವೇಳೆ ಪ್ರದರ್ಶನಕ್ಕೆ ಇಡುವುದಾಗಿ ಬೋಯಿಂಗ್‌ ಕಂಪನಿ ಪ್ರಕಟಿಸಿದೆ.

ಈ ವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ತನ್ನ ಅಭ್ಯಂತರವಿಲ್ಲ ಎಂದು ಅಮೆರಿಕ ಸರ್ಕಾರ ಬೋಯಿಂಗ್‌ ಕಂಪನಿಗೆ ತಿಳಿಸಿದೆ. ಹೀಗಾಗಿ ಭಾರತದ ಟೆಂಡರ್‌ಗೆ ಬೋಯಿಂಗ್‌ ಬಿಡ್‌ ಮಾಡಲು ಅಡ್ಡಿಯಿಲ್ಲ. ಆದರೆ ಇದನ್ನು ಖರೀದಿಸುವುದು, ಬಿಡುವುದು ಭಾರತದ ನಿರ್ಧಾರವಾಗಿರಲಿದೆ.

ಯಾವುದು ಈ ವಿಮಾನ?:

ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವ, ಬಹುಪಾತ್ರಗಳನ್ನು ನಿರ್ವಹಿಸುವ ವಿಮಾನಗಳು ಇವು. ಭಾರಿ ಗಾತ್ರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದು, ಅತ್ಯುತ್ತಮ ಫಲಿತಾಂಶ ನೀಡಬಲ್ಲವು. ಅಮೆರಿಕದ ಬಳಿ 4 ದಶಕಗಳಿಂದ ಎಫ್‌-15 ಯುದ್ಧ ವಿಮಾನವಿದೆ. ಅದರ ಅತ್ಯಂತ ಸುಧಾರಿತ, ಸರ್ವಋುತು, ಹಗಲು-ರಾತ್ರಿ ಕಾರ್ಯಾಚರಣೆ ನಡೆಸುವ ವಿಮಾನವೇ ಎಫ್‌-15 ಎಕ್ಸ್‌.

114 ಸಮರ ವಿಮಾನಗಳನ್ನು 1.3 ಲಕ್ಷ ಕೋಟಿ ರು. ವೆಚ್ಚದಲ್ಲಿ ಖರೀದಿಸಲು 2019ರ ಏಪ್ರಿಲ್‌ನಲ್ಲಿ ಭಾರತೀಯ ವಾಯುಪಡೆ ಮಾಹಿತಿ ಕೋರಿಕೆ ಅಥವಾ ಆರಂಭಿಕ ಟೆಂಡರ್‌ ಆಹ್ವಾನಿಸಿತ್ತು. ಇದನ್ನು ವಿಶ್ವದ ಅತಿದೊಡ್ಡ ಮಿಲಿಟರಿ ಖರೀದಿ ಪ್ರಕ್ರಿಯೆ ಎಂದು ಬಣ್ಣಿಸಲಾಗಿತ್ತು. ಈ ಒಪ್ಪಂದ ಹಿಡಿಯಲು ಅಮೆರಿಕದ ಎಫ್‌-16, ಫ್ರಾನ್ಸ್‌ನ ರಫೇಲ್‌, ಯುರೋಫೈಟರ್‌ ಟೈಫäನ್‌, ರಷ್ಯಾದ ಮಿಗ್‌ 35, ಸಾಬ್‌ನ ಗ್ರಿಪೆನ್‌ ಕಂಪನಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.