ದೋಣಿ ಮಗುಚಿ ಪ್ರವಾಸಕ್ಕೆ ಬಂದ 6 ಮಕ್ಕಳು ಬಲಿ, 10 ಮಂದಿ ನಾಪತ್ತೆ!
ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ಬಂದ ಮಕ್ಕಳಲ್ಲಿ 6 ಮಂದಿ ದುರಂತ ಅಂತ್ಯ ಕಂಡಿದ್ದರೆ, 10 ಮಂದಿ ನಾಪತ್ತೆಯಾಗಿದ್ದಾರೆ. ಶ್ರೀನಗರದಲ್ಲಿ ದೋಣಿ ಮಗುಚಿ ಪರಿಣಾಮ ಈ ದುರ್ಘಟನೆ ನಡೆದಿದೆ.
ಶ್ರೀನಗರ(ಏ.16) ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯ ಇದೀಗ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಭಯೋತ್ಪಾದಕ ಕೃತ್ಯಗಳು ತಣ್ಣಗಾಗಿರುವ ಕಾರಣ ಭಾರತ ಮೂಲೆ ಮೂಲೆಯಿಂದ ಇದೀಗ ಕಾಶ್ಮೀರ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗೆ ಶ್ರೀನಗರಕ್ಕೆ ಪ್ರವಾಸ ಕೈಗೊಂಡಿದ್ದ 26 ಮಂದಿ ದೋಣಿ ದುರಂತದಲ್ಲಿ ಸಿಲುಕಿದ್ದಾರೆ. ಈ ಪೈಕಿ 6 ಮಕ್ಕಳು ಮೃತಪಟ್ಟಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ. 10 ಮಂದಿಯನ್ನು ರಕ್ಷಿಸಲಾಗಿದೆ. ಶ್ರೀನಗರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರಯಲ್ಲಿ ಮಳೆಯಾಗುತ್ತಿರುವ ಕಾರಣ ನೀರಿನ ಮಟ್ಟ ಹಾಗೂ ಹರಿವು ಏರಿಕೆಯಾಗಿದೆ. ನಿರ್ಲಕ್ಷ್ಯ ವಹಿಸಿದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ.
ಮಳೆಯಿಂದಾಗಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ ವಿಹಾರದಲ್ಲಿ ದೋಣಿ ಮುನ್ನಡೆಸುತ್ತಿರುವ ಆಯೋಜಕರು ನಿರ್ಲಕ್ಷ್ಯವಹಿಸಿದ್ದಾರೆ. ಆದರೆ ನದಿಯ ಮದ್ಯಕ್ಕೆ ತೆರಳುತ್ತಿದ್ದ ದೋಣಿ ಮುಂದೆ ಸಾಗಲು ಪ್ರಯಾಸ ಪಟ್ಟಿದೆ. ಇದೇ ವೇಳೆ ಹಗ್ಗ ಬಳಸಿ ದೋಣಿಯನ್ನು ಎಳೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ದೋಣಿ ಮಗುಚಿದೆ.
ದೋಣಿಯಲ್ಲಿ ಬಹುತೇಕ ಮಕ್ಕಳೇ ಇದ್ದ ಕಾರಣ ಸಾವು ನೋವಿನ ಪ್ರಮಾಣ ಹೆಚ್ಚಾಗಿದೆ. ತಕ್ಷಣವೇ ರಕ್ಷಣಾ ತಂಡ ನೆರವಿಗೆ ಧಾವಿಸಿದೆ. ಅಷ್ಟರಲ್ಲೇ 6 ಮಕ್ಕಳು ಮೃತಪಟ್ಟಿದ್ದಾರೆ. ಇತ್ತ 10 ಮಕ್ಕಳು ನಾಪತ್ತೆಯಾಗಿದ್ದಾರೆ. ಕೆಲವರನ್ನು ರಕ್ಷಿಸಲಾಗಿದೆ. ಇದೀಗ ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ಮುಂದುವರಿಸಿದೆ.
ಶ್ರೀನಗರ ಭಾಗದಲ್ಲಿ ಭಾರಿ ಮಳೆಯಾಗಿರುವ ಕಾರಣ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಭಾರಿ ಮಳೆಯಿಂದ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ಹೀಗಾಗಿ ಈ ಹೆದ್ದಾರಿ ಸಂಚಾರ ನಿರ್ಬಂಧಿಸಲಾಗಿದೆ. ಇಷ್ಟಾದಾರು ಮಕ್ಕಳ ವಿಹಾರಕ್ಕೆ ಕರೆದುಕೊಂಡು ಹೋದಾಗ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.
ಸ್ಥಳಕ್ಕೆ ಪೊಲೀಸ್ ಹಾಗೂ ಸ್ಥಲೀಯ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯಗಳು ಮುಂದುವರಿದಿದೆ. ನದಿಯ ಒಳ ಹರಿವು ಹೆಚ್ಚಾಗಿರುವ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುವ ಸಾಧ್ಯತೆ ಇದೆ.