ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾಯತ್
* ಬಿಜೆಪಿ ಕಾರ‍್ಯಕರ್ತರ ಸಾವು ಹಿಂಸಾಚಾರಕ್ಕೆ ಪ್ರತಿಕ್ರಿಯೆಯಷ್ಟೇ
* ಹಿಂಸಾಚಾರಕ್ಕಿಳಿದ ರೈತರ ಸಮರ್ಥಿಸಿಕೊಂಡ ಟಿಕಾಯತ್
* ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾಯತ್
ನವದೆಹಲಿ(ಅ.10): ಲಖೀಂಪುರ ಹಿಂಸಾಚಾರದ(Lakhimpur Violence) ವೇಳೆ ನಾಲ್ವರು ಬಿಜೆಪಿ(BJP) ಕಾರ್ಯಕರ್ತರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ ರೈತರನ್ನು ತಪ್ಪಿತಸ್ಥರು ಎಂಬುದಾಗಿ ಪರಿಗಣಿಸಲಾಗದು ಎಂದು ಭಾರತೀಯ ಕಿಸಾನ್ ಒಕ್ಕೂಟದ(Bharak Kisan Union) ನಾಯಕ ರಾಕೇಶ್ ಟಿಕಾಯತ್(Rakesh Tikait) ಹೇಳಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟಿಕಾಯತ್ ಅವರು, ‘ಲಖೀಂಪುರದಲ್ಲಿ(Lakhimpur) ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲು ಕಾರುಗಳು ಹಾದು ಹೋಗಿವೆ. ಇದರಿಂದ ರೊಚ್ಚಿಗೆದ್ದ ರೈತರು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ದೋಷಿಗಳೆಂದು ಪರಿಗಣಿಸಲಾಗದು. ಇಲ್ಲಿ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಡೆದಿದೆಯಷ್ಟೇ’ ಎಂದು ಹೇಳಿದರು. ತನ್ಮೂಲಕ ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಟಿಕಾಯತ್ ಅವರು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ ರೈತರು ಸೇರಿದಂತೆ 8 ಮಂದಿ ಸಾವಿಗೆ ಕಾರಣವಾಗಿರುವ ಲಖೀಂಪುರ ಹಿಂಸಾಚಾರವು ಪೂರ್ವ ಯೋಜಿತ ಪಿತೂರಿಯಾಗಿದ್ದು, ಈ ಕೃತ್ಯಕ್ಕೆ ಕಾರಣವಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶಿಷ್ ಮಿಶ್ರಾರನ್ನು(Ashish Mishra) ಬಂಧಿಸಬೇಕು. ಜತೆಗೆ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಈ ಘಟನೆ ಖಂಡಿಸಿ ದಸರಾ ಹಬ್ಬವಾದ ಅ.15ರಂದು ಪ್ರಧಾನಿ ನರೇಂದ್ರ ಮೋದಿ(narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ ಎಂದು ರೈತ ನಾಯಕರು ಹೇಳಿದ್ದಾರೆ.
ಕೇಂದ್ರ ಸಚಿವರ ಪುತ್ರ ಅರೆಸ್ಟ್!
ನಾಲ್ವರು ರೈತರು ಸೇರಿ 8 ಮಂದಿ ಸಾವಿಗೆ ಕಾರಣವಾಗಿರುವ ಲಖೀಂಪುರ ಹಿಂಸಾಚಾರಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ, ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾನನ್ನು ಶನಿವಾರ ತಡರಾತ್ರಿ ಬಂಧಿಸಲಾಗಿದೆ.
‘ಘಟನೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಕೆಲವು ದಾಖಲೆಗಳೊಂದಿಗೆ ಅವರು 12 ತಾಸಿನ ವಿಚಾರಣೆ ವೇಳೆ ಸ್ಪಷ್ಟನೆ ನೀಡಲು ಯತ್ನಿಸಿದರು. ಆದರೆ ಪೊಲೀಸರ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾಗಿ ಅಸಹಕಾರ ತೋರಿದರು. ಹೀಗಾಗಿ ಅವರನ್ನು ಬಂಧಿಸಲಾಯಿತು. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತೇವೆ’ ಎಂದು ಸಹಾರನ್ಪುರ ಡಿಐಜಿ ಉಪೇಂದ್ರ ಅಗರ್‌ವಾಲ್ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಘಟನೆ ನಡೆದ ಅ.3ರ ಮಧ್ಯಾಹ್ನ 2.30ರಿಂದ 3.30ರ ನಡುವೆ ತಾನು ಎಲ್ಲಿ ಇದ್ದೆ ಎಂಬುದನ್ನು ಹೇಳಲು ಆಶಿಷ್ ವಿಫಲರಾದರು. ಇದೇ ಅವರ ಬಂಧನಕ್ಕೆ ಕಾರಣವಾಯಿತು.
ಇದರೊಂದಿಗೆ ಆಶಿಷ್ ಬಂಧನ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದ ರೈತ ಸಂಘಟನೆಗಳು ಹಾಗೂ ವಿಪಕ್ಷಗಳ ಪ್ರಮುಖ ಬೇಡಿಕೆ ಈಡೇರಿದಂತಾಗಿದೆ. ಜತೆಗೆ, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೇರಿದೆ. ಈ ಮುನ್ನ ಇಬ್ಬರು ಆಶಿಷ್ ಆಪ್ತರನ್ನು ಬಂಧಿಸಲಾಗಿತ್ತು.
ಶುಕ್ರವಾರ ವಿಚಾರಣೆಗೆ ಆಶಿಷ್ರನ್ನು ಕರೆದಿತ್ತಾದರೂ ಅವರು ಬಂದಿರಲಿಲ್ಲ. ಆದರೆ, ಘಟನೆ ನಡೆದು ಸುಮಾರು 1 ವಾರದ ಬಳಿಕ ಶನಿವಾರ ಬೆಳಗ್ಗೆ 10.30ಕ್ಕೆ ಲಖೀಂಪುರ ಕ್ರೈಮ್ ಬ್ರಾಂಚ್ ಪೊಲೀಸರೆದುರು ಆಶಿಷ್ ಹಾಜರಾದರು. ಡಿಐಜಿ ಅಗರ್‌ವಾಲ್ ನೇತೃತ್ವದ 11 ಜನರ ಎಸ್‌ಐಟಿ ತಂಡ ತಡರಾತ್ರಿ 11ರವರೆಗೆ ವಿಚಾರಣೆ ನಡೆಸಿತು.