ಬಿಎಸ್‌ವೈಗೆ ನಡ್ಡಾ ಭೇಷ್: ಕೊರೋನಾ ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ!
ಬಿಎಸ್‌ವೈಗೆ ನಡ್ಡಾ ಭೇಷ್| ಕೊರೋನಾ ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ
ಬೆಂಗಳೂರು(ಜೂ.15): ಕೋವಿಡ್ ಸೋಂಕು ಹರಡದಂತೆ ತಡೆಯಲು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರಗಳು ಸಾಕಷ್ಟುಪ್ರಯತ್ನ ನಡೆಸುತ್ತಿರುವ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಕ್ಷಿಪ್ರಗತಿಯಲ್ಲಿ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶಹಬ್ಬಾಸ್‌ಗಿರಿ ನೀಡಿದ್ದಾರೆ.
ಲಾಕ್ಡೌನ್ ವೇಳೆ ಕಾರ್ಮಿಕರ ಕಣ್ಣೀರು ಒರೆಸಿದ್ದೇವೆ: ಕಟೀಲ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಭಾನುವಾರ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ‘ಕರ್ನಾಟಕ ಜನ ಸಂವಾದ ರಾರಯಲಿ’ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾದ ಬಡವರು, ಕಾರ್ಮಿಕರು ಮುಂತಾದವರಿಗೆ ಮೋದಿ ಅವರ ಮಾದರಿಯಲ್ಲೇ ಯಡಿಯೂರಪ್ಪ ಅವರು ಆರ್ಥಿಕ ನೆರವು, ದಿನಸಿ, ಆಹಾರದ ಪ್ಯಾಕೆಟ್‌ಗಳನ್ನು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೀಸಲಾತಿಗೆ ಕೇಂದ್ರ ಸರ್ಕಾರ, ಬಿಜೆಪಿ ಬದ್ಧ: ನಡ್ಡಾ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ತಡೆಯುವಲ್ಲಿ ಯಡಿಯೂರಪ್ಪ ನೇತೃತ್ವದ ತಂಡ ಅತ್ಯಂತ ಯಶಸ್ವಿಯಾಗಿದೆ. ನಾಲ್ಕು ‘ಟಿ’ ಸೂತ್ರ (ಜಾಡು ಹಿಡಿಯುವ, ಪರೀಕ್ಷೆ ನಡೆಸುವ, ತಂತ್ರಜ್ಞಾನದ ಉಪಯೋಗ ಮತ್ತು ಚಿಕಿತ್ಸೆ) ಮೂಲಕ ರಾಜ್ಯ ಹಾಗೂ ರಾಜಧಾನಿಯಲ್ಲಿ ಸೋಂಕು ತಡೆಯುವ ಕೆಲಸವನ್ನು ಮಾಡಲಾಗಿದೆ. ಕೋವಿಡ್ ಫಾರ್ಮೇಷನ್ ಸೆಂಟರ್ ಪೋರ್ಟಲ್ ಮೂಲಕ ಎಲ್ಲ ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳನ್ನು ಜೋಡಿಸಲಾಗಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಆಸ್ಪತ್ರೆ, ಕೋವಿಡ್ ರೆಸ್ಪಾನ್ಸ್ ಟೀಮ್ ರಚನೆ ಮಾಡಿದ್ದಾರೆ. ಅದೇ ರೀತಿ ವಲಸೆ ಕಾರ್ಮಿಕರಿಗೆ ನೆರವಾಗಲು ಸಹಾಯವಾಣಿ ಸ್ಥಾಪಿಸಿದ್ದಾರೆ. ಈ ಸಂಖ್ಯೆಗೆ ತೊಂದರೆಯಲ್ಲಿರುವ ಕಾರ್ಮಿಕ ಫೋನ್ ಮಾಡಿದರೆ ಹಿರಿಯ ಅಧಿಕಾರಿ ಅದನ್ನು ಸ್ವೀಕರಿಸಿ, ಆತ ಇದ್ದ ಸ್ಥಳಕ್ಕೆ ಊಟ ಪೂರೈಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಂಕಷ್ಟದ ಸಮಯದಲ್ಲಿಯೂ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಜತೆಗೆ ಬಡ, ಮಧ್ಯಮ ವರ್ಗ ಹಾಗೂ ಕಾರ್ಮಿಕರಿಗಾಗಿ 2100 ಕೋಟಿ ರು.ಗಳ ಪರಿಹಾರದ ಪ್ಯಾಕೇಜನ್ನು ಯಡಿಯೂರಪ್ಪ ಘೋಷಿಸಿದ್ದಾರೆ. ದೋಬಿಗಳು, ಸವಿತಾ ಸಮಾಜಕ್ಕೆ ಐದು ಸಾವಿರ ರು. ನಗದು ಪರಿಹಾರ ನೀಡಿದ್ದಾರೆ. ಸುಮಾರು 14 ಸಾವಿರ ನೇಕಾರರಿಗೆ ತಲಾ ಎರಡು ಸಾವಿರ ರು. ಪರಿಹಾರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ತಲಾ ಐದು ಸಾವಿರ ರು. ನೀಡಲಾಗಿದೆ. ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ರು. ಪ್ರೋತ್ಸಾಹ ಧನ ನೀಡಿರುವುದು ಶ್ಲಾಘನೀಯ ಎಂದು ನಡ್ಡಾ ಹೇಳಿದರು.