ಮೋದಿ ತವರಲ್ಲಿ ರಾಜಕೀಯ ಬೆಳವಣಿಗೆ; ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ!
- ಕರ್ನಾಟಕದ ಬಳಿಕ ಇದೀಗ ಗುಜರಾತ್‌ನಲ್ಲಿ ಸಿಎಂ ರಾಜೀನಾಮೆ
- ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜಿನಾಮೆ
ಗುಜರಾತ್(ಸೆ.11): ಕರ್ನಾಟಕದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್‌ನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ರೂಪಾನಿ ರಾಜೀನಾಮೆಗೆ ಸ್ಪಷ್ಟ ಕಾರಣಗಳು ಬಹಿರಂಗವಾಗಿಲ್ಲ. ಗುಜರಾತ್‌ನ 16ನೇ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಆಗಸ್ಟ್ 7, 2016ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆನಂದಿ ಬೆನ್ ಪಟೇಲ್ ಬಳಿಕ ಮುಖ್ಯಮಂತ್ರಿಯಾದ ರೂಪಾನಿ ಮೋದಿ ಬಳಿಕ ಗುಜರಾತ್ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ರೂಪಾನಿ ರಾಜೀನಾಮೆ ನೀಡುವ ಮೂಲಕ ಕಳೆದ ಕೆಲ ತಿಂಗಳಲ್ಲಿ ರಾಜೀನಾಮೆ ನೀಡಿದ ಬಿಜಿಪಿ ಮುಖ್ಯಮಂತ್ರಿಗಳ ಪೈಕಿ ರೂಪಾನಿ ನಾಲ್ಕನೇಯವಾಗಿದ್ದಾರೆ. ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಸವರಾಜ್ ಬೊಮ್ಮಾಯಿಗ ಪಟ್ಟ ಕಟ್ಟಲಾಗಿದೆ. ಇದಕ್ಕೂ ಮೊದಲು ಉತ್ತರಖಂಡದಲ್ಲಿ 4 ತಿಂಗಳಲ್ಲಿ ಎರಡೆರಡು ಬಾರಿ ಸಿಎಂ ಬದಲಾವಣೆಯಾಗಿದೆ. ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆಯಿಂದ ತೀರ್ಥ ಸಿಂಗ್ ರಾವತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ನಾಲ್ಕು ತಿಂಗಳಲ್ಲಿ ತೀರ್ಥ ಸಿಂಗ್ ರಾವತ್ ರಾಜೀನಾಮೆ ನೀಡಿ ಇದೀಗ ಪುಷ್ಕರ್ ಸಿಂಗ್ ಧಮಿಗೆ ಪಟ್ಟ ಕಟ್ಟಲಾಗಿದೆ.