ವಿವಾದಾತ್ಮಕ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌| ಸಂಸದೆ ಪ್ರಜ್ಞಾಗೆ ಉಸಿರಾಟ ತೊಂದರೆ| ಮುಂಬೈಗೆ ಏರ್‌ಲಿಫ್ಟ್‌

ಭೋಪಾಲ್‌(ಮಾ.07): ವಿವಾದಾತ್ಮಕ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೆ ಶನಿವಾರ ಉಸಿರಾಟ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಭೋಪಾಲ್‌ನಿಂದ ಏರ್‌ಲಿಫ್ಟ್‌ ಮಾಡಿ ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಧ್ಯಾಹ್ನ ಮನೆಯಲ್ಲಿ ಪ್ರಜ್ಞಾ ಏಕಾಏಕಿ ಅಸ್ವಸ್ಥರಾದರು. ಕೂಡಲೇ ಅವರನ್ನು ಮುಂಬೈಗೆ ಕರೆದೊಯ್ಯಲಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಈ ಮೂಲಕ ಪ್ರಜ್ಞಾ ಸಿಂಗ್‌ ಅವರು ಒಂದೇ ತಿಂಗಳಲ್ಲಿ 2 ಬಾರಿ ಆಸ್ಪತ್ರೆಗೆ ದಾಖಲಾದಂತಾಗಿದೆ. ಈ ಹಿಂದೆ ಫೆ.19ರಂದು ಇಂಥದ್ದೇ ಕಾರಣಗಳಿಂದ ಆರೋಗ್ಯ ಹದಗೆಟ್ಟಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅದಕ್ಕೂ ಮೊದಲು ಡಿಸೆಂಬರ್‌ 2020ರಲ್ಲಿ ಕೋವಿಡ್‌ ಸೋಂಕು ತಗುಲಿದ್ದ ಕಾರಣ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.