* ಬಂಗಾಳ ಬಿಜೆಪಿಗೆ ಆಘಾತ: ಟಿಎಂಸಿಗೆ ಸಂಸದ ಅರ್ಜುನ್‌ ಸಿಂಗ್‌ ವಾಪಸ್‌* ಪಕ್ಷದ ಸಂಸದ ಅರ್ಜುನ್‌ ಸಿಂಗ್‌ ಶನಿವಾರ ತೃಣಮೂಲ ಕಾಂಗ್ರೆಸ್‌ಗೆ ಮರಳಿ ಸೇರ್ಪಡೆಯಾಗಿದ್ದಾರೆ.

ಕೋಲ್ಕತಾ(ಮಾ.23): ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ. ಪಕ್ಷದ ಸಂಸದ ಅರ್ಜುನ್‌ ಸಿಂಗ್‌ ಶನಿವಾರ ತೃಣಮೂಲ ಕಾಂಗ್ರೆಸ್‌ಗೆ ಮರಳಿ ಸೇರ್ಪಡೆಯಾಗಿದ್ದಾರೆ. ಬಹಳ ದಿನಗಳಿಂದ ಅವರು ಆಡಳಿತ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂಬ ವದಂತಿಗಳು ಹರಿದಾಡುತ್ತಿತ್ತು. ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ದಕ್ಷಿಣ ಕೋಲ್ಕತಾದಲ್ಲಿರುವ ಅವರ ಕಚೇರಿಯಲ್ಲಿ ಸಿಂಗ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.

‘ಬಿಜೆಪಿಯ ಮಾಜಿ ಉಪಾಧ್ಯಕ್ಷ ಮತ್ತು ಹಾಲಿ ಸಂಸದ ಅರ್ಜುನ್‌ ಸಿಂಗ್‌ ಅವರನ್ನು ಟಿಎಂಸಿ ಕುಟುಂಬಕ್ಕೆ ಸ್ವಾಗತಿಸುತ್ತೇವೆ’ ಎಂದು ಪಕ್ಷ ಟ್ವೀಟ್‌ ಮಾಡಿದೆ. ಟಿಎಂಸಿಯ ನಾಯಕರಾಗಿದ್ದ ಸಿಂಗ್‌ ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಸಂಸದ ಬಾಬುಲ್‌ ಸುಪ್ರಿಯೋ ಸಹ ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಯಾಗಿದ್ದರು.

ವಿದೇಶದಲ್ಲಿ ಮೋದಿ ಟೀಕಿಸಿ ರಾಹುಲ್‌ ವಿವಾದ

ಭಾರತದ ಸ್ಥಿತಿ ಸರಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಯಾರ ಮಾತೂ ಕೇಳುವುದಿಲ್ಲ. ದೇಶಾದ್ಯಂತ ಈಗ ಸೀಮೆಎಣ್ಣೆ ಚೆಲ್ಲಿದೆ. ಬೆಂಕಿ ಹೊತ್ತಿಕೊಳ್ಳಲು ಬೇಕಿರುವುದು ಒಂದು ಕಿಡಿಯಷ್ಟೆ...!

ಬ್ರಿಟನ್ನಿನಲ್ಲಿ ಆಯೋಜಿಸಿದ್ದ ‘ಐಡಿಯಾಸ್‌ ಫಾರ್‌ ಇಂಡಿಯಾ’ ಶೃಂಗದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ ಪರಿಯಿದು. ಈ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ವಿದೇಶದ ನೆಲದಲ್ಲಿ ಭಾರತಕ್ಕೆ ರಾಹುಲ್‌ ಗಾಂಧಿ ಅವಮಾನ ಮಾಡಿದ್ದಾರೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ರಾಹುಲ್‌ ಮಾತಿಗೆ ಆಕ್ಷೇಪ ವ್ಯಕ್ತವಾಗಿದೆ. ಆದರೆ, ಶಿವಸೇನೆ ರಾಹುಲ್‌ ಗಾಂಧಿ ಸರಿಯಾಗಿಯೇ ಹೇಳಿದ್ದಾರೆ ಎಂದು ಬೆಂಬಲಿಸಿದೆ.

ಇನ್ನಷ್ಟುಭಾರತೀಯ ನಾಯಕರೆದುರೇ ವಾಗ್ದಾಳಿ:

ಐಡಿಯಾಸ್‌ ಫಾರ್‌ ಇಂಡಿಯಾ ಶೃಂಗದಲ್ಲಿ ಭಾರತದ ಇನ್ನಷ್ಟುವಿಪಕ್ಷಗಳ ನಾಯಕರಾದ ಸಿಪಿಎಂನ ಸೀತಾರಾಂ ಯೆಚೂರಿ, ಆರ್‌ಜೆಡಿಯ ತೇಜಸ್ವಿ ಯಾದವ್‌ ಹಾಗೂ ಟಿಎಂಸಿಯ ಮೊಹುವಾ ಮೊಯಿತ್ರಾ ಮುಂತಾದವರೂ ಪಾಲ್ಗೊಂಡಿದ್ದರು. ಅವರ ಉಪಸ್ಥಿತಿಯಲ್ಲೇ ಶುಕ್ರವಾರ ಸಂವಾದದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ, ‘ಭಾರತದಲ್ಲಿ ಪರಿಸ್ಥಿತಿ ಸರಿಯಿಲ್ಲ. ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಅದರ ಪರಿಣಾಮವಾಗಿ ರಾಜ್ಯಗಳು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುವ ಸ್ಥಿತಿ ಉಳಿದಿಲ್ಲ. ಇದರಿಂದಾಗಿ ದೇಶಕ್ಕೆ ಭಾರಿ ಹಾನಿಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

ಭಾರತವೆಂದರೆ ಬಿಜೆಪಿಗೆ ಚಿನ್ನದ ಹಕ್ಕಿ:

‘ಪ್ರಧಾನಿ ನರೇಂದ್ರ ಮೋದಿ ಯಾರ ಮಾತನ್ನೂ ಕೇಳುವುದಿಲ್ಲ. ಬಿಜೆಪಿ ಕೇವಲ ಜೋರಾಗಿ ಕಿರುಚಿ, ಇನ್ನುಳಿದವರ ಬಾಯಿ ಮುಚ್ಚಿಸುತ್ತದೆ. ನಾವು ಬರೀ ಕೇಳುತ್ತಿದ್ದೇವೆ. ಇಡೀ ದೇಶದಲ್ಲೀಗ ಸೀಮೆಎಣ್ಣೆ ಚೆಲ್ಲಿಕೊಂಡಿದೆ. ಒಂದೇ ಒಂದು ಕಿಡಿ ಬಿದ್ದರೆ ಬೆಂಕಿ ಹೊತ್ತಿಕೊಳ್ಳುತ್ತದೆ. ಭಾರತವೆಂದರೆ ಜನರ ನಡುವಿನ ಸೌಹಾರ್ದ ಚರ್ಚೆ ಎಂದು ನಾವು ನಂಬಿದ್ದರೆ ಬಿಜೆಪಿ ಮತ್ತು ಆರೆಸ್ಸೆಸ್‌ನವರು ಭಾರತವೆಂದರೆ ಚಿನ್ನದ ಹಕ್ಕಿ (ಸೋನೆ ಕಿ ಚಿಡಿಯಾ) ಎಂದುಕೊಂಡಿದ್ದಾರೆ. ಹೀಗಾಗಿ ಅವರು ಕೆಲವೇ ಜನರಿಗೆ ಎಲ್ಲ ಲಾಭ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.