"ಬಿಲ್ಕಿಸ್ ಬಾನೊ ಅತ್ಯಾಚಾರಿಗಳು ಬ್ರಾಹ್ಮಣರು, ಸುಸಂಸ್ಕೃತರು"; ಬಿಜೆಪಿ ಶಾಸಕ
Bilkis Bano Rapists Release: ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ ದೇಶಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಆದರೆ ಗುಜರಾತ್‌ನ ಬಿಜೆಪಿ ಶಾಸಕ ಅತ್ಯಾಚಾರಿಗಳನ್ನು ಸುಸಂಸ್ಕೃತರು ಎನ್ನುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ನವದೆಹಲಿ: ಬಿಲ್ಕಿಸ್ ಬಾನೊ ಪ್ರಕರಣದ ಅತ್ಯಾಚಾರಿಗಳನ್ನು ಸ್ವತಂತ್ರೋತ್ಸವದ ಅಂಗವಾಗಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಇದರ ಬೆನ್ನಲ್ಲೇ ಗುಜರಾತ್‌ನ ಗೋದ್ರಾ ಕ್ಷೇತ್ರದ ಬಿಜೆಪಿ ಶಾಸಕ ಅತ್ಯಾಚಾರಿಗಳು ಬ್ರಾಹ್ಮಣರು ಮತ್ತು ಉತ್ತಮ ಸಂಸ್ಕಾರ ಉಳ್ಳವರು ಎಂದು ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಬಿಜೆಪಿ ಶಾಸಕ ಸಿಕೆ ರೌಲ್ಜಿ, ಅತ್ಯಾಚಾರಿಗಳು ಅಪರಾಧ ಮಾಡಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಜೈಲಿನಲ್ಲಿ ಅವರು ಉತ್ತಮ ನಡತೆ ಹೊಂದಿದ್ದರು. ಅವರೆಲ್ಲರೂ ಬ್ರಾಹ್ಮಣರು ಮತ್ತು ಉತ್ತಮ ಸಂಸ್ಕಾರ ಹೊಂದಿದವರು ಎಂದು ಹೇಳಿಕೆ ನೀಡಿದ್ದಾರೆ.
ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಬೇಕೊ ಅಥವಾ ಬೇಡವೊ ಎಂಬ ನಿರ್ಧಾರ ತೆಗೆದುಕೊಳ್ಳಲು ರಚಿಸಿದ ಸಮಿತಿಯಲ್ಲಿ ಸಿಕೆ ರೌಲ್ಜಿ ಕೂಡ ಒಬ್ಬರು. ಸಮಿತಿಯ ಸಭೆಯಲ್ಲಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಬೇಕು ಎಂದು ಅವಿರೋಧವಾಗಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರ ಪರಿಣಾಮ ಸ್ವತಂತ್ರೋತ್ಸವದ ಮರುದಿನ ಬಿಲ್ಕಿಸ್ ಬಾನೊ ಅತ್ಯಾಚಾರಿಗಳು ಬಿಡುಗಡೆಯಾಗಿದ್ದರು. ಅತ್ಯಾಚಾರಿಗಳಲ್ಲಿ ಒಬ್ಬ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಬಿಡುಗಡೆ ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರ ಈ ಬಗ್ಗೆ ನಿರ್ಧರಿಸಬೇಕು, ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿತ್ತು.
"ಅವರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರ ಇಲ್ಲವಾ ಎಂಬುದು ನನಗೆ ಗೊತ್ತಿಲ್ಲ. ಆದರೆ ಅಪರಾಧ ಮಾಡಲು ಕಾರಣ ಬೇಕಲ್ಲವೇ," ಎಂದು ಮೋಜೊ ಸ್ಟೋರಿ ಮಾಧ್ಯಮಕ್ಕೆ ರೌಲ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಆಡೋದು ಒಂದು, ಮಾಡೋದು ಒಂದು; ದ್ವಂದ್ವ ನೀತಿ ಜನತೆ ನೋಡುತ್ತಿದೆ; ರಾಹುಲ್ ಗಾಂಧಿ
"ಅವರು ಬ್ರಾಹ್ಮಣರು ಮತ್ತು ಬ್ರಾಹ್ಮಣರು ಉತ್ತಮ ಸಂಸ್ಕಾರಕ್ಕೆ ಹೆಸರಾದವರು. ಅವರ ವಿರದ್ಧ ಪಿತೂರಿ ನಡೆಸಿ ಶಿಕ್ಷಿಸುವ ಕೆಲಸ ಕೆಲವರಿಂದ ಆಗಿರಬಹುದು," ಎಂದು ಅವರು ಹೇಳಿದ್ದಾರೆ. ಸಿಕೆ ರೌಲ್ಜಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಹುಭಾಷಾ ನಟ ಪ್ರಕಾಶ್ ರಾಜ್ ಸಹ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಶಾಸಕರ ನಡೆಯನ್ನು ಪ್ರಶ್ನಿಸಿದ್ದಾರೆ.
ಸ್ವತಂತ್ರೋತ್ಸವದ ದಿನ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಕೆಲ ಗಂಟೆಗಳಲ್ಲೇ ಅತ್ಯಾಚಾರಿಗಳ ಬಿಡುಗಡೆಯಾಗಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಗುಜರಾತ್ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಕೇಂದ್ರ ಗೃಹ ಇಲಾಖೆ ಸೂಚನೆಯ ಅನ್ವಯ ಅತ್ಯಾಚಾರಿಗಳು ಮತ್ತು ಜೀವಾವಧಿ/ಜೀವಿತಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಬಾರದು. ಆದರೆ ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್ ಸೂಚನೆಯಂತೆ ಸಮಿತಿ ರಚಿಸಿ ಬಿಡುಗಡೆಗೆ ಆದೇಶ ನೀಡಿತ್ತು. ಅತ್ಯಾಚಾರಿಗಳನ್ನು ಸಂಭ್ರಮದಿಂದ ಸ್ವೀಕರಿಸಲಾಗಿತ್ತು.
ಇದನ್ನೂ ಓದಿ: Bilkis Bano Case: 11 ಅತ್ಯಾಚಾರಿಗಳಿಗೆ ಬಿಡುಗಡೆ ಭಾಗ್ಯ, ಗುಜರಾತ್ ಸರ್ಕಾರದ ವಿರುದ್ಧ ಆಕ್ರೋಶ
ತೆಲಂಗಾಣ ರಾಷ್ಟ್ರ ಸಮಿತಿಯ ವಕ್ತಾರ ವೈ ಸತೀಶ್ ರೆಡ್ಡಿ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಅತ್ಯಾಚಾರಿಗಳು ಬ್ರಾಹ್ಮಣರು. ಉತ್ತಮ ಸಂಸ್ಕಾರ ಹೊಂದಿದವರು. ಜೈಲಿನಲ್ಲಿ ಅವರ ನಡತೆ ಉತ್ತಮವಾಗಿತ್ತು," ಎಂದು ಬಿಜೆಪಿ ಶಾಸಕ ಅತ್ಯಾಚಾರಿಗಳನ್ನು ಸಂಸ್ಕಾರವಂತರು ಎಂದಿದ್ದಾರೆ. ಇಷ್ಟು ನೀಚ ಹಂತಕ್ಕೆ ಯಾವುದೇ ಪಕ್ಷವೂ ಇಳಿದಿರಲಿಲ್ಲ, ಎಂದು ಸತೀಶ್ ರೆಡ್ಡಿ ಬಿಜೆಪಿಯನ್ನು ಖಂಡಿಸಿದ್ದಾರೆ.