ವಿರೋಧಿ ಅಲೆ ಇದ್ದ ಹತ್ರಾಸ್, ಉನ್ನಾವ್, ಲಖೀಂಪುರ ಕ್ಷೇತ್ರಗಳಲ್ಲೂ ಬಿಜೆಪಿಗೆ ಭಾರೀ ಮುನ್ನಡೆ!
* ಸೈಕಲ್ ಹಿಂದಿಕ್ಕಿದ ಬುಲ್ಡೋಜರ್: ಸಮೀಕ್ಷೆಗಳ ಲೆಕ್ಕಾಚಾರ ಸುಳ್ಳು ಮಾಡಿದ ಬಿಜೆಪಿ
* ಅಯೋಧ್ಯೆ, ಹತ್ರಾಸ್, ನೊಯ್ಡಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
* ಬಿಜೆಪಿಗೆ ಪೆಟ್ಟು ಕೊಡದ ಕೃಷಿ ಕಾಯ್ದೆ ವಿರೋಧಿ ಹೋರಾಟ, ಲಖೀಂಪುರ ಖೇರಿಯಲ್ಲೂ ಮುನ್ನಡೆ
* ಯಾದವೇತರ ಮತಗಳು ಬಿಜೆಪಿಗೆ, ಜಾಟ್ ಬಾಹುಳ್ಯದ ಕ್ಷೇತ್ರಗಳಲ್ಲೂ ಕಮಲ ಪಾಳಯ ಮುನ್ನಡೆ
ಲಕ್ನೋ(ಮಾ.10): ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಕರೆಯಲಾಗುವ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಇಡೀ ದೇಶದ ಗಮನಸೆಳೆದಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆಗಳು ಹೇಳಿದಂತೆ ದೇಶದ ಅತೀದೊಡ್ಡ ವಿಧಾನಸಭೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಹೌದು 403 ವಿಧಾನಸಭಾ ಕ್ಷೇತ್ರಗಳಿರುವ ಯುಪಿಯಲ್ಲಿ ಬಿಜೆಪಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ 278 ಕ್ಷೇತ್ರಗಳಲಲ್ಇ ಮುನ್ನಡೆ ಕಾಯ್ದುಕೊಂಡಿದೆ. ಅಚ್ಚರಿಯ ವಿಚಾರವೆಂದರೆ ಬಹುಮತದತ್ತ ಸಾಗುತ್ತಿರುವ ಕೇಸರಿ ಪಾಳಯ ತನ್ನ ವಿರೋಧಿ ಅಲೆ ಇದ್ದ ಹತ್ರಾಸ್, ಉನ್ನಾವ್, ಲಖೀಂಪುರದ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದೆ ಎಂಬುವುದು ಭಾರೀ ಅಚ್ಚರಿಯ ವಿಚಾರ.
ಹೌದು ಈ ಬಾರಿ ಅತ್ಯಾಚಾರ ಹಾಗೂ ಅತೀ ಹೆಚ್ಚು ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಹತ್ರಾಸ್, ಉನ್ನಾವ್‌ನಲ್ಲಿ ಬಿಜೆಪಿ ಸೋಲುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿ ನಾಲ್ವರು ರೈತರ ಸಾವಿಗೆ ಕಾರಣವಾಗಿದ್ದ ಪ್ರಕರಣವೂ ಉಲ್ಟಾ ಹೊಡೆಯಲಿದೆ. ಈ ಮೂಲಕ ಇಲ್ಲೂ ಕೇಸರಿ ಪಾಳಯಕ್ಕೆ ಸೋಲುಂಟಾಗಬಹುದು ಎನ್ನಲಾಗಿತ್ತು. ಆದರೀಗ ಈ ಎಲ್ಲಾ ಲೆಕ್ಕಾಚಾರವೂ ತಲೆಕೆಳಗಾಗಿದೆ. ಈ ಪ್ರದೇಶಗಳಲಲ್ಇ ಬಿಜೆಪಿ ಭಾರೀ ಅಂತರದ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲು ಇಡುತ್ತಿದೆ.
ಯಾದವೇತರ ಮತಗಳು ಬಿಜೆಪಿಗೆ, ಜಾಟ್ ಬಾಹುಳ್ಯದ ಕ್ಷೇತ್ರಗಳಲ್ಲೂ ಕಮಲ ಪಾಳಯ ಮುನ್ನಡೆ
ಈ ಬಾರಿಯೂ 2017ರ ಚುನಾವಣೆಯಂತೆ ಜಾಟ್ ಬಾಹುಳ್ಯದ ಕ್ಷೇತ್ರಗಳಲ್ಲೂ ಕಮಲ ಪಾಳಯ ಮುನ್ನಡೆ ಸಾಧಿಸಿದ್ದು, ಯಾದವೇತರ ಮತಗಳು ಬಿಜೆಪಿ ತೆಕ್ಕೆಗೆ ಜಾರಿವೆ. ಈ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ.
ಯೋಗಿ ಸರ್ಕಾರದ ಈ 42 ಸಚಿವರು ಕಣದಲ್ಲಿ, ಫಲಿತಾಂಶವೇನು? SP ಸೇರಿದವರಿಗೆ ಮುಖಭಂಗ!
ಈ ಬಾರಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಸರ್ಕಾರದ 42 ಸಚಿವರು ಕಣದಲ್ಲಿದ್ದರು. ಅಗ್ನಿಪರೀಕ್ಷೆಯ ಈ ಸಂದರ್ಭದಲ್ಲಿ, ಯೋಗಿ ಸರ್ಕಾರದ ಜೊತೆಗೆ, ಈ ಮಂತ್ರಿಗಳ ಭವಿಷ್ಯವೂ ಅಪಾಯದಲ್ಲಿದೆ. ಇಂದು ಬೆಳಗ್ಗೆ ಆರಂಭವಾದ ಮತ ಎಣಿಕೆಯಲ್ಲಿ ಬಹುತೇಕ ಸಚಿವರು ತಮ್ಮ ಎದುರಾಳಿಗಳಿಗಿಂತ ಮುಂದಿದ್ದಾರೆ. ಆದಾಗ್ಯೂ, ಕೆಲವು ಸಚಿವರು ಪ್ರತಿಸ್ಪರ್ಧಿಗಳಿಂದ ಕೊಂಚ ದೂರವಿದ್ದಾರೆ. ಯೋಗಿ ಸರ್ಕಾರದ 42 ಸಚಿವರ ಪೈಕಿ 9 ಸಚಿವರ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿಯೇ ಮತದಾನ ನಡೆದಿದೆ. ಉಳಿದ 33 ಸಚಿವರಲ್ಲಿ ಇತರೆ ಹಂತಗಳಲ್ಲಿ ಮತದಾನ ನಡೆದಿದೆ.
ಈ ಚುನಾವಣೆಯಲ್ಲಿ, ಯೋಗಿ ಸರ್ಕಾರದಲ್ಲಿದ್ದ ನಾಯಕರ ವಿಶ್ವಾಸಾರ್ಹತೆಯೂ ಅಪಾಯದಲ್ಲಿದೆ, ಐದು ವರ್ಷ ಸರ್ಕಾರಿ ಐಷಾರಾಮಿಗಳನ್ನು ಅನುಭವಿಸಿ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಅನೇಕರು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮಡಿಲಲ್ಲಿ ಕುಳಿತರು. ಪ್ರಾಥಮಿಕ ಫಲಿತಾಂಶದಲ್ಲಿ ಬಿಜೆಪಿ ತೊರೆದು ಎಸ್‌ಪಿ ಸೇರಿರುವ ಸ್ವಾಮಿ ಪ್ರಸಾದ್ ಮೌರ್ಯ ಫಾಜಿಲ್‌ನಗರ ಕ್ಷೇತ್ರದಿಂದ ಹಿನ್ನಡೆ ಅನುಭವಿಸಿದ್ದಾರೆ. ಬೆಳಗ್ಗೆ ಆರಂಭವಾದ ಮತ ಎಣಿಕೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಅಶುತೋಷ್ ಟಂಡನ್ ಮತ್ತು ಕಾನೂನು ಸಚಿವ ಬ್ರಿಜೇಶ್ ಪಾಠಕ್ ಮುನ್ನಡೆಯಲ್ಲಿದ್ದಾರೆ.