ಜೈಪುರ(ಜು.17): ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕುತ್ತು ಬಂದೊದಗಿದ್ದು, ಸಚಿನ್ ಪೈಲಟ್ ನೇತೃತ್ವದ ಕಾಂಗ್ರೆಸ್ ಶಾಸಕರ ತಂಡ ಸರ್ಕಾರ ಉರುಳಿಸುವ ಸಾಧ್ಯತೆ ಇದೆ.

ಶಾಸಕರಿಗೆ ಈಗಾಗಲೇ ಅನರ್ಹತೆ ನೋಟಿಸ್ ಕುಳುಹಿಸಿದ್ದು, ಶಾಸಕರೂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಎಲ್ಲ ರಾಜಕೀಯ ಡ್ರಾಮಾ ನಡುವೆ ಅಚ್ಚರಿಯ ಬೆಳವಣಿಗೆ ಎಂಬಂತೆ ಬಿಜೆಪಿ ನಾಯಕಿ, ರಾಜಸ್ಥಾನದ ಮಾಜಿ ಸಿಎಂ ವಸುಂಧರ ರಾಜೆ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರ ಬೆಂಬಲಿಸುವಂತೆ ಶಾಸಕರಿಗೆ ಕರೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯತ್ತ ಸಚಿನ್ ಪೈಲಟ್: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಪತನ?

ಸಚಿನ್ ಪೈಲಟ್‌ ತಂಡದಿಂದ ಸರ್ಕಾರ ಉರುಳುವ ಭೀತಿ ಎದುರಿಸುತ್ತಿರುವ ಸಿಎಂಗೆ ಬಿಜೆಪಿ ನಾಯಕಿ ನೆರವಾಗಲು ಪ್ರಯತ್ನಿಸಿದ್ದಾರೆ. ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೆನಿವಾಲ್ ಟ್ವೀಟ್ ಮಾಡಿದ್ದು, ಈ ಟ್ವೀಟ್ ಕಾಂಗ್ರೆಸ್‌ನ ಎರಡು ಗುಂಪಿನ ನಡುವಿನ ಭಿನ್ನಾಭೀಪ್ರಾಯಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ. ವಸುಂಧರಾ ರಾಜೆ ಅವರು ಅತೃಪ್ತ ಶಾಸಕರ ಭಿನ್ನಾಭಿಪ್ರಾಯ ಕಳೆಯಲು ಯತ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ವಸುಂಧರಾ ರಾಜೆ ಅವರು ತಮಗೆ ಆತ್ಮೀಯರಾದ ಕೆಲವು ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ ಅಶೋಕ್ ಅವರನ್ನು ಬೆಂಬಲಿಸುವಂತೆ ಕೇಳಿದ್ದಾರೆ. ಅವರು ಪ್ರತಿ ಶಾಸಕರಿಗೂ ಕರೆ ಮಾಡಿದ್ದಾರೆ. ಸಿಕಾರ್ ಹಾಗೂ ನಾಗಪುರದಲ್ಲಿರುವ ಶಾಸಕರಿಗೆ ಕರೆ ಮಾಡಿ ಸಚಿನ್ ಪೈಲಟ್‌ನಿಂದ ದೂರವಿರುವಂತೆ ಕೇಳಿಕೊಂಡಿದ್ದಾರೆ. ನನ್ನಲ್ಲಿ ಇದಕ್ಕೆ ಸಂಬಂಧಿಸಿದ ಸಾಕ್ಷ್ಯವಿದೆ ಎಂದು ಅವರು ಹೇಳಿದ್ದಾರೆ.

ಅನರ್ಹತೆ ನೋಟಿಸ್‌ ಪ್ರಶ್ನಿಸಿ ಸಚಿನ್ ಪೈಲಟ್‌ ಟೀಮ್‌ ಕೋರ್ಟ್‌ಗೆ

ವಸುಂಧರಾ ಅವರ ಆಪ್ತರೂ ಈ ಬಗ್ಗೆ ಹೇಳಿದ್ದು, ಅವರು ಅಶೋಕ್‌ ಗೆಹ್ಲೋಟ್‌ಗೆ ನೆರವಾಗುತ್ತಿರುವುದಾಗಿ ತಿಳಿಸಿದ್ದಾರೆ. ಹನುಮಾನ್ ಬೆನಿವಾಲ್ ವಸುಂಧರಾ ರಾಜೆ ಅವರನ್ನು ಸದಾ ಟೀಕಿಸುತ್ತಲೇ ಇದ್ದು, 2018ರ ರಾಜಸ್ಥಾನ ಚುನಾವಣೆ ಮುನ್ನ ಬಿಜೆಪಿ ತೊರೆದಿದ್ದರು.