ನವದೆಹಲಿ[ಫೆ.28]: ದೆಹಲಿ ಹಿಂಸಾಚಾರ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಮೆರಿಕದ ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಬರ್ನಿ ಸ್ಯಾಂಡರ್ಸ್‌ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ತಿರುಗೇಟು ನೀಡಿದ್ದಾರೆ. ಬೇರೊಂದು ದೇಶದ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಿದರೆ, ನಾವು ನಿಮ್ಮ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಟ್ವೀಟ್‌ ಮಾಡಿದ್ದಾರೆ. ಆದರೆ ಕೆಲ ಹೊತ್ತಿನ ಬಳಿಕ ಆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚಿನ ಭಾರತ ಭೇಟಿ ವೇಳೆ, ‘ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ನಾನು ತಲೆ ಹಾಕಲ್ಲ. ಅದು ಭಾರತದ ಆಂತರಿಕ ವಿಚಾರ’ ಎಂದಿದ್ದರು. ಟ್ರಂಪ್‌ರ ಈ ಹೇಳಿಕೆಯನ್ನು ಪ್ರಶ್ನಿಸಿ ಅಮೆರಿಕದ ಡೆಮಾಕ್ರೆಟಿಕ್‌ ಪಕ್ಷದ ಮುಖಂಡ ಬರ್ನಿ ಸ್ಯಾಂಡರ್ಸ್‌ ಟೀಕೆ ಮಾಡಿದ್ದು, ಇದಕ್ಕೆ ಸಂತೋಷ್‌ ಟ್ವೀಟರ್‌ನಲ್ಲೇ ತೀಕ್ಷ$್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ- ಆರೆಸ್ಸೆಸ್‌ಗೆ ಈಗ ಸಂತೋಷ್‌ ಸಂಪರ್ಕ ಸೇತು!

ಟ್ರಂಪ್‌ ಹೇಳಿಕೆಯ ಬಗ್ಗೆ ಸ್ಯಾಂಡರ್ಸ್‌ ಟ್ವೀಟ್‌ ಮಾಡಿ, ‘200 ದಶಲಕ್ಷ ಮುಸ್ಲಿಮರು ಭಾರತವನ್ನು ತಮ್ಮ ಮನೆ ಎಂದು ಕರೆಯುತ್ತಾರೆ. ಆದರೆ ದಿಲ್ಲಿಯಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರ ನಡೆದಿದ್ದು, 27 ಮಂದಿ ಹತರಾಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಟಂಪ್‌ ಅವರು ‘ಇದು ಭಾರತಕ್ಕೆ ಬಿಟ್ಟವಿಚಾರ’ ಎನ್ನುತ್ತಾರೆ. ಇದು ಮಾನವ ಹಕ್ಕುಗಳ ನಾಯಕತ್ವದ ವೈಫಲ್ಯ’ ಎಂದು ಟೀಕಿಸಿದ್ದಾರೆ.

ಇದಕ್ಕೆ ಹರಿತ ಪ್ರತಿಕ್ರಿಯೆ ನೀಡಿದ ಬಿ.ಎಲ್‌. ಸಂತೋಷ್‌, ‘ನಾವು ತಟಸ್ಥ ಧೋರಣೆ ತಾಳಬೇಕು ಎಂದು ಬಯಸುತ್ತಿರುತ್ತೇವೆ. ಆದರೆ ನೀವು ಅಧ್ಯಕ್ಷೀಯ ಚುನಾವಣೆಯಲ್ಲಿ ಪಾತ್ರ ವಹಿಸುವಂತೆ ಬಲವಂತಪಡಿಸುತ್ತೀರಿ. ಹೀಗೆ ಹೇಳಿದ್ದಕ್ಕೆ ಕ್ಷಮೆ ಇರಲಿ. ಆದರೆ ನೀವು ನಮ್ಮನ್ನು ಬಲವಂತಪಡಿಸುತ್ತಿದ್ದೀರಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಆದರೆ ಈ ಟ್ವೀಟ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಲು ಆರಂಭವಾದ ಬಳಿ ಅದನ್ನು ಸಂತೋಷ್‌ ‘ಡಿಲೀಟ್‌’ ಮಾಡಿದ್ದಾರೆ.