Asianet Suvarna News Asianet Suvarna News

ತನ್ನನ್ನು LKG ಮಗು ಎಂದ ಬಿಜೆಪಿ ನಾಯಕನಿಗೆ, ಮೇಯರ್​ ಆರ್ಯ ತಿರುಗೇಟು!

* ದೇಶದ ಅತ್ಯಂತ ಕಿರಿಯ ಮೇಯರ್​ ಆರ್ಯ ರಾಜೇಂದ್ರನ್ ಅಪಹಾಸ್ಯ

* ವಯಸ್ಸು ಮುಂದಿಟ್ಟುಕೊಂಡು ಅಪಹಾಸ್ಯ ಮಾಡಿದ ನಾಯಕನಿಗೆ ತಿರುಗೇಟು ಕೊಟ್ಟ ಆರ್ಯ

* ತಕ್ಕಂತೆ ಕಾರ್ಯನಿರ್ವಹಿಸಲು ನನಗೆ ಗೊತ್ತು. ನನ್ನ ಪಕ್ವತೆಯನ್ನು ಅಳೆಯಲು ಬರಬೇಡಿ

BJP leader calls Thiruvananthapuram Mayor Arya Rajendran LKG student her reply is viral pod
Author
Bangalore, First Published Jun 20, 2021, 4:50 PM IST

ತಿರುವನಂತಪುರಂ(ಜೂ.19): ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಗೆ 21 ವರ್ಷದ ಯುವತಿ ಆರ್ಯ ರಾಜೇಂದ್ರನ್ ಇತ್ತೀಚೆಗೆ ಮೇಯರ್​ ಆಗಿ ಆಯ್ಕೆಯಾಗಿದ್ದರು. ಈ ಮೂಲಕ ಇಡೀ ದೇಶದಲ್ಲೇ ಮೇಯರ್​ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದರು. ಹೀಗಿದ್ದರೂ ಅವರ ವಯಸ್ಸನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರೊಬ್ಬರು ಅವರನ್ನು ಅಣಕಿಸಿದ್ದಾರೆ. ಆದರೀಗ ತನ್ನನ್ನು ಅಣಕಿಸಿದ ಬಿಜೆಪಿ ನಾಯಕನಿಗೆ ಮೇಯರ್​ ಆರ್ಯ ರಾಜೇಂದ್ರನ್ ತಿರುಗೇಟು ನೀಡಿದ್ದು, ನೆಟ್ಟಿಗರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಹೌದು ಬಿಜೆಪಿ ಕೌನ್ಸಿಲರ್ ಕರಮನ ಅಜಿತ್, ಅತ್ಯಂತ ಕಿರಿಯ ವಯಸ್ಸಿಗೇ ಮೇಯರ್ ಆಗಿದ್ದ ಆರ್ಯ ರಾಜೇಂದ್ರನ್‌ ಬಗ್ಗೆ 'ಎಲ್‌ಕೆಜಿ ಮಕ್ಕಳನ್ನು ಮೇಯರ್‌ ಮಾಡಲಾಗಿದೆ. ಅವರು ಎಕೆಜಿ(ಸಿಪಿಎಂ ಮುಖ್ಯ ಕಾರ್ಯಾಲಯವನ್ನು ಎಕೆಜಿ ಸೆಂಟರ್ ಎಂದು ಕರೆಯಲಾಗುತ್ತದೆ) ಕೇಂದ್ರದ ಎಲ್‍ಕೆಜಿ ಮಗು' ಎಂದು ಕಾಲೆಳೆದಿದ್ದರು. ಸಾಲದೆಂಬಂತೆ ಜೂನ್ 17ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಅಜಿತ್ ಮತ್ತೆ ಅವರನ್ನು ಎಲ್‍ಕೆಜಿ ಮಗು ಎಂದೇ  ವ್ಯಂಗ್ಯವಾಡಿ  ಮೇಯರ್ ಸ್ಥಾನ ಮಗು ಹಾಗೂ ಕಾರ್ಪೊರೇಷನ್ ಮಕ್ಕಳ ಪಾರ್ಕ್ ಅಲ್ಲ, ಜನರ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಸ್ಥಳ' ಎಂದು ಹೇಳಿದ್ದರು.

ಆದರೀಗ ಬಿಜೆಪಿ ನಾಯಕನ ಈ ವ್ಯಂಗ್ಯಭರಿತ ಮಾತುಗಳಿಗೆ ಆರ್ಯ ರಾಜೇಂದ್ರನ್ ತಿರುಗೇಟು ನೀಡಿದ್ದು, 'ಈ ಹಿಂದೆ ಕೂಡ ಹಲವಾರು ಬಾರಿ ನನ್ನನ್ನು ವೈಯಕ್ತಿಕವಾಗಿ ಟೀಕಿಸಿದ್ದೀರಿ ಅಥವಾ ನನ್ನ ವಯಸ್ಸು ಹಾಗೂ ಪ್ರಬುದ್ಧತೆಯ ವಿಚಾರ ಮುಂದಿಟ್ಟುಕೊಂಡು ಟೀಕಿಸಿದ್ದೀರಿ, ಆದರೆ ಈಗ ನಾನು ಇದನ್ನು ಹೇಳುವುದು ಅನಿವಾರ್ಯವಾಗಿದೆ.  ನಾನು ಈ ವಯಸ್ಸಿನಲ್ಲಿ ಮೇಯರ್ ಆಗಿದ್ದೇನೆ ಎಂದರೆ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ನನಗೆ ಗೊತ್ತು. ನನ್ನ ಪಕ್ವತೆಯನ್ನು ಅಳೆಯಲು ಬರಬೇಡಿ. ಅಂತಹ ಒಂದು ವ್ಯವಸ್ಥೆಯಲ್ಲೇ ನಾನು ಬೆಳೆದು ಬಂದಿದ್ದೇನೆ, ಅದರ ಬಗ್ಗೆ ನನಗೆ ಹೆಮ್ಮೆಯಿದೆ' ಎಂದು ಖಾರವಾಗೇ ಹೇಳಿದ್ದಾರೆ. 

ಇದೇ ವೇಳೆ ಬಿಜೆಪಿ ನಾಯಕನಿಗೆ ತಿರುಗೇಟು ಕೊಟ್ಟ ಅವರು 'ನಿಮ್ಮ ಫಾಲೋವರ್ಸ್ ಕಮೆಂಟ್‍ಗಳನ್ನು ನಾನು ತೋರಿಸಿದರೆ ಹಾಗೂ ಫೇಸ್ ಬುಕ್, ವಾಟ್ಸ್ಯಾಪ್‍ನಲ್ಲಿ ಯುವಜನರು ಸೇರಿದಂತೆ ಹಲವರು ಪೋಸ್ಟ್ ಮಾಡುವ ಅವಹೇಳನಕಾರಿ ಕಮೆಂಟ್‍ಗಳನ್ನು ಗಮನಿಸಿದರೆ, ಈ ಮೇಯರ್ ಕೂಡ ನಿಮ್ಮ ಮನೆಯಲ್ಲಿರುವ ಸಹೋದರಿಯರು, ತಾಯಂದಿರಂತೆ ಎಂದು ನಿಮಗೆ ನೆನಪಾಗಬೇಕು" ಎಂದಿದ್ದಾರೆ. ಆರ್ಯ ಅವರನ್ನು ಈ ವೇಳೆ ವಿಪಕ್ಷಗಳು ತಡೆಯಲು ಯತ್ನಿಸಿದರಾದರೂ ಅವರು ತನ್ನ ಮಾತುಗಳನ್ನು ದಿಟ್ಟತನದಿಂದ ಮುಂದುವರಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ಆರ್ಯ ಅವರ ಧೈರ್ಯ ಹಾಗೂ ತಿರುಗೇಟಿಗೆ ಭೇಷ್ ಎಂದಿದ್ದಾರೆ.

Follow Us:
Download App:
  • android
  • ios