ನವದೆಹಲಿ[ಜ.11]: 2019ರ ಲೋಕಸಭೆ ಚುನಾವಣೆಗೆ ಮುನ್ನ 2410 ಕೋಟಿ ರು. ದೇಣಿಗೆ ಹರಿದುಬಂದಿದೆ. ಈ ಪೈಕಿ ಚುನಾವಣಾ ಬಾಂಡ್‌ಗಳ ಮೂಲಕವೇ 1,450 ಕೋಟಿ ರು. ದೇಣಿಗೆ ಸಂದಾಯವಾಗಿದೆ. ಇದರಿಂದ ಒಟ್ಟಾರೆ ದೇಣಿಗೆಯ ಪೈಕಿ ಚುನಾವಣಾ ಬಾಂಡ್‌ ಮುಖಾಂತರ ಶೇ.61ರಷ್ಟುಪಾಲು ಆಡಳಿತಾರೂಢ ಪಕ್ಷಕ್ಕೆ ದೊರಕಿದಂತಾಗಿದೆ.

ಇನ್ನು ಕಾಂಗ್ರೆಸ್‌ ಪಕ್ಷಕ್ಕೆ ಒಟ್ಟಾರೆ 918 ಕೋಟಿ ರು. ದೇಣಿಗೆ ಸಂಗ್ರಹವಾಗಿದ್ದು, ಇದರಲ್ಲಿ ಚುನಾವಣಾ ಬಾಂಡ್‌ ಮೂಲಕ 383 ಕೋಟಿ ರು. ಹರಿದುಬಂದಿದೆ.

ಚುನಾವಣಾ ಆಯೋಗಕ್ಕೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು 2018-19ನೇ ಸಾಲಿನ ತಮ್ಮ ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸಿವೆ. ಅದರಲ್ಲಿ ಈ ಅಂಶಗಳಿವೆ. ಇನ್ನು 2018ರ ಮಾಚ್‌ರ್‍ನಿಂದ 2019ರ ಮೇವರೆಗೆ ಸುಮಾರು 5 ಸಾವಿರ ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬ್ಯಾಂಕ್‌ಗಳು ನೀಡಿವೆ.

ಬ್ಯಾಂಕ್‌ಗಳಲ್ಲಿ ಲಭ್ಯವಿರುವ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ಅವುಗಳನ್ನು ಪಕ್ಷಗಳಿಗೆ ದೇಣಿಗೆದಾರರು ನೀಡುತ್ತಾರೆ. ಪಕ್ಷಗಳು ಆ ಬಾಂಡ್‌ಗಳನ್ನು ನಗದೀಕರಿಸಿ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುತ್ತವೆ. ಆದರೆ ಬಾಂಡ್‌ ಮುಖಾಂತರ ದೇಣಿಗೆ ನೀಡಿದವರ ಹೆಸರು ನಿಯಮದ ಪ್ರಕಾರ ಬಹಿರಂಗವಾಗುವುದಿಲ್ಲ. ಇದು ವಿವಾದದ ಮೂಲವಾಗಿದ್ದು, ಕಾಂಗ್ರೆಸ್‌ ಪಕ್ಷ ಸೇರಿದಂತೆ ಅನೇಕ ವಿಪಕ್ಷಗಳು ಬಾಂಡ್‌ ಮೂಲಕ ದೇಣಿಗೆ ಸಂಗ್ರಹ ವಿರೋಧಿಸಿವೆ.

2017-18ರಲ್ಲಿ ಒಟ್ಟಾರೆ 222 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ಗಳ ಪೈಕಿ 210 ಕೋಟಿ ರು. (ಶೇ.95) ಮೌಲ್ಯದ ಬಾಂಡ್‌ಗಳನ್ನು ತನ್ನದಾಗಿಸಿಕೊಂಡಿತ್ತು. ಚುನಾವಣಾ ಬಾಂಡ್‌ಗಳು ಆಗಿನ್ನೂ ಹೊಸದಾಗಿ ಬಿಡುಗಡೆ ಆದ ಸಮಯ ಅದಾಗಿದ್ದರಿಂದ ಕಡಿಮೆ ಮೊತ್ತದ ಬಾಂಡ್‌ಗಳು ಖರೀದಿಯಾಗಿದ್ದವು.

1005 ಕೋಟಿ ಖರ್ಚು ಮಾಡಿದ ಬಿಜೆಪಿ:

2017-18ನೇ ಸಾಲಿನಲ್ಲಿ ಬಿಜೆಪಿ 758 ಕೋಟಿ ರು. ಖರ್ಚು ಮಾಡಿತ್ತು. ಆದರೆ ಲೋಕಸಭಾ ಚುನಾವಣಾ ವರ್ಷವಾಗಿದ್ದ 2018-19ರಲ್ಲಿ 1005 ಕೋಟಿ ರು.ಗಳನ್ನು ಬಿಜೆಪಿ ಖರ್ಚು ಮಾಡಿದೆ. ಇನ್ನು ಕಾಂಗ್ರೆಸ್‌ ಪಕ್ಷ 469 ಕೋಟಿ ರು. ಖರ್ಚು ಮಾಡಿದೆ.

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ 2018-19ರಲ್ಲಿ 192 ಕೋಟಿ ದೇಣಿಗೆ ಸಂಗ್ರಹಿಸಿ ಕೇವಲ 11 ಕೋಟಿ ರು. ಖರ್ಚು ಮಾಡಿದೆ. 192 ಕೋಟಿಯಲ್ಲಿ 97 ಕೋಟಿ ರು.ಗಳನ್ನು ಚುನಾವಣಾ ಬಾಂಡ್‌ ಮೂಲಕ ಅದು ಸಂಗ್ರಹಿಸಿದೆ. ಸಿಪಿಎಂ 100 ಕೋಟಿ ರು. ಸಂಗ್ರಹಿಸಿ 71 ಕೋಟಿ ರು. ಖರ್ಚು ಮಾಡಿದೆ. ಬಿಎಸ್‌ಪಿ 69 ಕೋಟಿ ರು. ಗಳಿಸಿ 38 ಕೋಟಿ ಖರ್ಚು ಮಾಡಿದೆ. ಚುನಾವಣಾ ಬಾಂಡ್‌ ಮೂಲಕ ಸಂಗ್ರಹವಾದ ದೇಣಿಗೆ ಎಷ್ಟುಎಂಬುದನ್ನು ಬಿಎಸ್‌ಪಿ ಹಾಗೂ ಸಿಪಿಎಂ ಹೇಳಿಲ್ಲ. ಸಿಪಿಐ ಕೇವಲ 7 ಕೋಟಿ ರು. ಆದಾಯ ಗಳಿಸಿದೆ.

ಜ.13ರಿಂದ ಬಾಂಡ್‌:

ಇದೇ ಜನವರಿ 13ರಿಂದ ಮತ್ತೆ ಚುನಾವಣಾ ಬಾಂಡ್‌ ವಿತರಣೆ ಬ್ಯಾಂಕ್‌ಗಳಲ್ಲಿ ಆರಂಭವಾಗಲಿದ್ದು, ಜನವರಿ 22ರವರೆಗೆ ನಡೆಯಲಿದೆ. ಸ್ಟೇಟ್‌ ಬ್ಯಾಂಕ್‌ನ ದೇಶದ ಆಯ್ದ ನಗರಗಳ 29 ಶಾಖೆಗಳಲ್ಲಿ ಇದರ ವಿತರಣೆ ನಡೆಯಲಿದೆ. ಇದು ಬಾಂಡ್‌ ಮಾರಾಟದ 13ನೇ ಆವೃತ್ತಿಯಾಗಿದೆ. ಮೊದಲ ಆವೃತ್ತಿಯಲ್ಲಿ 2018ರ ಮಾಚ್‌ರ್‍ 1ರಿಂದ 10ರವರೆಗೆ ಬಾಂಡ್‌ ಮಾರಾಟವಾಗಿದ್ದವು. ಎಸ್‌ಬಿಐಗೆ ಮಾತ್ರ ಬಾಂಡ್‌ ಮಾರಾಟ ಅಧಿಕಾರವಿದೆ.