10 ದಿನಗಳಲ್ಲಿ ದೇಶದ 3 ಕೋಟಿಗೂ ಹೆಚ್ಚು ಕುಟುಂಬಗಳ ಸಂಪರ್ಕಕ್ಕಾಗಿ ದೇಶಾದ್ಯಂತ 1000 ಬೃಹತ್‌ ಕಾರ್ಯಾಗಾರ ಹಾಗೂ 250 ಪತ್ರಿಕಾಗೋಷ್ಠಿಗಳನ್ನು ಪೌರತ್ವ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಬಿಜೆಪಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.

ನವದೆಹಲಿ (ಡಿ.22): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಹೊತ್ತಿಕೊಂಡಿರುವ ಕಿಚ್ಚನ್ನು ನಂದಿಸಲು ಮುಂದಾಗಿರುವ ಬಿಜೆಪಿ, ಇದಕ್ಕಾಗಿ ರಾಷ್ಟ್ರದಾದ್ಯಂತ ಜನ ಸಂಪರ್ಕ ರ‌್ಯಾಲಿ ಆಯೋಜನೆಗೆ ನಿರ್ಧರಿಸಿದೆ. ಇನ್ನು 10 ದಿನಗಳಲ್ಲಿ ದೇಶದ 3 ಕೋಟಿಗೂ ಹೆಚ್ಚು ಕುಟುಂಬಗಳ ಸಂಪರ್ಕಕ್ಕಾಗಿ ದೇಶಾದ್ಯಂತ 1000 ಬೃಹತ್‌ ರ‌್ಯಾಲಿಗಳು ಹಾಗೂ 250 ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತದೆ. ಈ ಮೂಲಕ ಪೌರತ್ವದ ಕಾಯ್ದೆ ಹಾಗೂ ಎನ್‌ಆರ್‌ಸಿ ಬಗ್ಗೆ ಜನ ಸಾಮಾನ್ಯರಲ್ಲಿ ಪ್ರತಿಪಕ್ಷಗಳು ಹರಡಿರುವ ಸುಳ್ಳುಗಳನ್ನು ಬಯಲು ಮಾಡುತ್ತೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್‌ ಯಾದವ್‌ ಗುಡುಗಿದ್ದಾರೆ.

Add Asianetnews Kannada as a Preferred SourcegooglePreferred

ಪೌರತ್ವ ಕಾಯ್ದೆಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆಯಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಬಿಜೆಪಿ ಕಾರ್ಯತಂತ್ರದ ರೂಪುರೇಷಗಳನ್ನು ರೂಪಿಸಿದೆ. ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಶನಿವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: ಉ.ಪ್ರದಲ್ಲಿ 15 ಜನರ ಸಾವು!..

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದರ್‌ ಯಾದವ್‌, ‘ನೂತನ ಕಾಯ್ದೆ ಬಗ್ಗೆ ಜನರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ದೇಶದ ಪ್ರತೀ ಜಿಲ್ಲೆಗಳು ಸೇರಿ ಒಟ್ಟಾರೆ 1000 ರ‌್ಯಾಲಿ ಹಾಗೂ 250 ಪತ್ರಿಕಾಗೋಷ್ಠಿಗಳನ್ನು ನಡೆಸುತ್ತೇವೆ. ಈ ಮೂಲಕ ಮುಂದಿನ 10 ದಿನಗಳಲ್ಲಿ 3 ಕೋಟಿಗೂ ಹೆಚ್ಚು ಕುಟುಂಬಗಳನ್ನು ಭೇಟಿ ಮಾಡಿ, ಎನ್‌ಆರ್‌ಸಿ ಮತ್ತು ಸಿಎಎ ಕುರಿತಾದ ಗೊಂದಲಗಳನ್ನು ನಿವಾರಿಸುತ್ತೇವೆ. ಈ ಮೂಲಕ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಹೇಳುತ್ತಿರುವ ಸುಳ್ಳುಗಳನ್ನು ಬಯಲು ಮಾಡುತ್ತೇವೆ’ ಎಂದು ಗುಡುಗಿದರು.