Asianet Suvarna News Asianet Suvarna News

ಗುಜರಾತ್‌ ಚುನಾವಣೆಯಿಂದ ಹಿಂದೆ ಸರಿಯಲು ಬಿಜೆಪಿ ಆಮಿಷ: ಕೇಜ್ರಿ ಬಾಂಬ್‌

ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಬಿಜೆಪಿ ವಿರುದ್ಧ ಬಲವಾದ ಆರೋಪ ಮಾಡಿದ್ದಾರೆ.‘

BJP has lured AAP to withdraw from contesting Gujarat elections: Arvind Kejriwal akb
Author
First Published Nov 6, 2022, 9:11 AM IST

ಅಹಮದಾಬಾದ್‌: ಗುಜರಾತ್‌ ಚುನಾವಣೆಗೆ ದಿನಗಳು ಬಾಕಿ ಇರುವಂತೆಯೇ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಬಿಜೆಪಿ ವಿರುದ್ಧ ಬಲವಾದ ಆರೋಪ ಮಾಡಿದ್ದಾರೆ.‘ ಗುಜರಾತ್‌ ಚುನಾವಣೆಯಲ್ಲಿ ಹಿಂದೆ ಸರಿದರೆ ಆಪ್‌ ನಾಯಕರಾದ ಮನೀಶ್‌ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್‌ ಅವರ ಮೇಲಿರುವ ಪ್ರಕರಣವನ್ನು ಹಿಂಪಡೆಯುವುದಾಗಿ ಬಿಜೆಪಿ ಆಫರ್‌ ಮಾಡಿದೆ’ ಎಂದು ಅವರು ಹೇಳಿದ್ದಾರೆ.

ಸುದ್ದಿ ವಾಹಿನಿಯೊಂದರ ಜೊತೆ ಶನಿವಾರ ಮಾತನಾಡಿದ ಕೇಜ್ರಿವಾಲ್‌ (Arvind Kejriwal), ‘ಆಪ್‌ (AAP) ತೊರೆದರೆ ದೆಹಲಿ ಮುಖ್ಯಮಂತ್ರಿಯನ್ನಾಗಿ (Delhi CM)ಮಾಡುವುದಾಗಿ ಬಿಜೆಪಿ ಮಾಡಿದ ಆಫರ್‌ ಅನ್ನು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ (Manish Sisodia) ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನನ್ನನ್ನು ಸಂಪರ್ಕಿಸಿದೆ. ನೀವು ಗುಜರಾತ್‌ ಚುನಾವಣೆಯನ್ನು ಬಿಟ್ಟು ಕೊಟ್ಟರೆ, ನಾವು ಸಿಸೋಡಿಯಾ ಮತ್ತು ಜೈನ್‌ ಅವರನ್ನು ಬಿಡುತ್ತೇವೆ. ಅವರ ವಿರುದ್ಧ ಇರುವ ಎಲ್ಲಾ ಪ್ರಕರಣಗಳನ್ನು ರದ್ದು ಮಾಡುತ್ತೇವೆ ಎಂದು ಬಿಜೆಪಿ ಹೇಳಿದೆ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿಯಲ್ಲಿ ಯಾರು ಆಫರ್‌ ಮಾಡಿದ್ದು?’ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ ಎಂದಿಗೂ ನಿಮ್ಮನ್ನು ನೇರವಾಗಿ ಸಂಪರ್ಕಿಸುವುದಿಲ್ಲ. ಅದು ಒಬ್ಬರಿಂದ ಒಬ್ಬರನ್ನು ತಲುಪುತ್ತಾ ಕೊನೆಗೆ ನಿಮ್ಮ ಸ್ನೇಹಿತರನ್ನು ತಲುಪುತ್ತದೆ. ಅವರ ಮೂಲಕ ನಿಮಗೆ ವಿಷಯ ತಿಳಿಯುತ್ತದೆ. ಗುಜರಾತ್‌ ಚುನಾವಣೆಯಲ್ಲಿ (Gujarat Election) ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಹಾಗಾಗಿ ಈ ರೀತಿ ನಡೆದುಕೊಳ್ಳುತ್ತಿದೆ. ಸಚಿವರ ವಿರುದ್ಧ ವಿಧಿಸಲಾದ ಪ್ರಕರಣಗಳನ್ನು ತೆಗೆಯುವುದಾಗಿ ಹೇಳುವುದನ್ನು ನೋಡಿದರೆ ಅವು ಸುಳ್ಳು ಪ್ರಕರಣಗಳು ಎಂಬುದು ಸಾಬೀತಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಕೇಜ್ರಿವಾಲ್‌ ಅವರ ಪ್ರಕಾರ ‘ಗುಜರಾತ್‌ನಲ್ಲಿ ಆಪ್‌ ಸ್ಪಷ್ಟಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ. ವಿಪಕ್ಷ ಸ್ಥಾನದಲ್ಲಿ ಕಾಂಗ್ರೆಸ್‌ 5ಕ್ಕೂ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಬಿಜೆಪಿ ಧೂಳಿಪಟವಾಗಲಿದೆ’.
 

Follow Us:
Download App:
  • android
  • ios