ತಿರುವನಂತಪುರ(ಜ.13): ಕೇರಳದ ಪಾಲಕ್ಕಾಡ್‌ ಸ್ಥಳೀಯ ಸಂಸ್ಥೆ ಕಟ್ಟಡದ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಬಿಜೆಪಿ ಚಿಹ್ನೆಯಿರುವ ಧ್ವಜ ಹೊದಿಸಲಾದ ಘಟನೆ ಸೋಮವಾರ ನಡೆದಿದ್ದು, ಇದು ಬಿಜೆಪಿ ವಿರುದ್ಧದ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಪ್ರತಿಭಟನೆಗೆ ಕಾರಣವಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಉದ್ದೇಶಪೂರಕವಾಗಿಯೇ ಬಿಜೆಪಿ ಈ ಕೃತ್ಯದಲ್ಲಿ ತೊಡಗಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಆಡಳಿತಾರೂಢ ಎಡಪಕ್ಷ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ಪ್ರತ್ಯೇಕ ಪ್ರತಿಭಟನೆ ಕೈಗೊಂಡಿವೆ. ಆದರೆ ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳುತ್ತಿದೆ.

ಈ ಹಿಂದೆ ಇದೇ ಕಟ್ಟಡದ ಮೇಲೆ ‘ಜೈ ಶ್ರೀ ರಾಮ್‌’ ಎಂಬ ಘೋಷವಾಕ್ಯವಿರುವ ಬ್ಯಾನರ್‌ ಹಾರಾಡಿತ್ತು. ಈ ಬಗ್ಗೆ ಬಿಜೆಪಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.