Asianet Suvarna News Asianet Suvarna News

ಬೃಹತ್ ಸಭೆಗಳಿಗೆ ಬಿಜೆಪಿ ಕಡಿವಾಣ: 500ಕ್ಕೂ ಹೆಚ್ಚು ಜನ ಸೇರಿಸದಂತೆ ನಿರ್ಧಾರ!

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಸಭೆಗಳಿಗೆ ಬಿಜೆಪಿ ಕಡಿವಾಣ ಹಾಕಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಚಾರಸಭೆಗಳನ್ನು ಕೇವಲ 500 ಜನರಿಗೆ ಮಾತ್ರ ಸೀಮಿತಗೊಳಿಸಿ, ಹೊರಾಂಗಣದಲ್ಲಿ ಮಾತ್ರ ಸಭೆಗಳನ್ನು ನಡೆಸುವುದಾಗಿ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ 5ನೇ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು 6ನೇ ಹಂತದ ಚುನಾವಣೆ ಏಪ್ರಿಲ್ 22 ರಂದು ನಡೆಯಲಿದೆ.

BJP decides to stop large rallies in West Bengal elections pod
Author
Bangalore, First Published Apr 20, 2021, 12:04 PM IST

ಕೋಲ್ಕತ್ತಾ(ಏ.20): ಭಾರತದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ದಿನದಿಂದ ದಿನಕ್ಕೇ ಹೆಚ್ಚಾಗುತ್ತಿದೆ.  ದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು  ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹಲವು ರಾಜ್ಯಗಳು ಈಗಾಗಲೇ ಲಾಕಡೌನ್ನಂತಹ ಕಠಿಣ ಕ್ರಮಗಳನ್ನು ಕೈಗೊಂಡಿವೆ. ಈ ಮಧ್ಯೆ ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದು ಚುನಾವಣಾ ಪ್ರಚರಾಕ್ಕೂ ಕೊರೊನಾ ಬಿಸಿ ತಟ್ಟಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸದಂತೆ ನಿರ್ಧರಿಸಿದೆ. ಚುನಾವಣಾ ಪ್ರಚಾರದ ಸಭೆಗಳಲ್ಲಿ 500 ಕ್ಕಿಂತ ಹೆಚ್ಚು ಜನರನ್ನು ಸೇರಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಈಗಾಗಲೇ 5ನೇ ಹಂತದ ಚುನಾವಣೆ ಮುಕ್ತಾಯವಾಗಿದೆ. 6ನೇ ಹಂತದ ಚುನಾವಣೆಯ ಪ್ರಚಾರದ ಅವಧಿ ಅಂತ್ಯಗೊಂಡಿದ್ದು ಏಪ್ರಿಲ್ 22 ರಂದು ಪಶ್ಚಿಮ ಬಂಗಾಳದ 43 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ʼಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇತರ ಕೇಂದ್ರ ನಾಯಕರು ಕೇವಲ ಸಣ್ಣ ಮಟ್ಟದ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದು 500 ಕ್ಕಿಂತ ಹೆಚ್ಚಿಗೆ ಜನರನ್ನು ಸೇರಲು ಅವಕಾಶ ನೀಡುವುದಿಲ್ಲʼ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತಿಳಿಸಿದ್ದಾರೆ. ಚುನಾವಣಾ ಸಭೆಗಳನ್ನು ಕೇವಲ ಹೊರಾಂಗಣದಲ್ಲಿ ನಡೆಸಲಾಗುವುದು, ಅಲ್ಲದೇ ಕೋವಿಡ್-19 ರ ಎಲ್ಲ ನಿಯಮಗಳನ್ನು ಪಾಲಿಸಲಾಗುವುದು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ 6 ಕೋಟಿ ಮಾಸ್ಕ್ ಹಾಗು ಸ್ಯಾನಿಟೈಜರ್ಗಳನ್ನು  ವಿತರಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ. 

ಕೊರೊನಾ ಮೊದಲನೇ ಅಲೆ ಬಂದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಅತ್ಯಂತ ಯಶಸ್ವಿಯಾಗಿ ಅದನ್ನು ನಿಭಾಯಿಸಿದ್ದೇವು ಈಗ ಮತ್ತೆ ಕೊರೊನಾ ಎರಡನೇ ಅಲೆಯ ಸವಾಲನ್ನು ಕೂಡ ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಬಿಜೆಪಿ ಹೇಳಿದೆ.

ʼಬಿಜೆಪಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿದೆ, ಅಲ್ಲದೇ ನರೇಂದ್ರ ಮೋದಿ ಮತ್ತು ಇತರ ನಾಯಕರ ಸಂದೇಶಗಳನ್ನು ಲಕ್ಷಾಂತರ ಜನರಿಗೆ ತಲುಪಿಸುತ್ತೇವೆ. ಬಿಹಾರ ಚುನಾವಣೆ ವೇಳೆಯಲ್ಲಿ ಈ ಕಾರ್ಯವನ್ನು ನಾವು ಅತ್ಯಂತ ಯಶಸ್ವಿಯಾಗಿ ಮಾಡಿದ್ದೇವೆ. ಬಿಹಾರ ಚುನಾವಣೆಯನ್ನು ಕೂಡ ಕೊರೊನಾದ ಭಿತಿಯೊಂದಿಗೆನೇ ನಾವು ಎದುರಿಸಿದ್ದೇವು. ಪ್ರತಿಪಕ್ಷಗಳು ನಮ್ಮ ಈ ತಂತ್ರವನ್ನು ದೂರಿದ್ದವು ಅಲ್ಲದೇ ಬಿಜೆಪಿಯೂ ಇದರಿಂದ ಹೆಚ್ಚಿನ ಲಾಭ ಪಡೆಯುತ್ತದೆ ಎಂದು ಹೇಳಿದ್ದವುʼ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಲ್ವಿಯಾ ಹೇಳಿದ್ದಾರೆ.

ಇತ್ತಿಚಿಗೆ ಕೊರೊನಾ ಭೀತಿಯ ನಡುವೆಯೂ ಚುನಾವಣಾ ಪ್ರಚಾರ ನಡೆಸುತ್ತಿದ್ದ ರಾಜಕಾರಣಿಗಳು ಟೀಕೆಗೆ ಗುರಿಯಾಗಿದ್ದರು. ಸರಕಾರದ ನಿಯಮಗಳು ಕೇವಲ ಜನಸಾಮಾನ್ಯಗರಿಗೆ ಮಾತ್ರನಾ ಅಥವಾ ರಾಜಕಾರಣಿಗಳಿಗೂ ಅನ್ವಯವಾಗುತ್ತವೆಯಾ? ಎಂದು ಜನರು ಪ್ರಶ್ನಿಸಿದ್ದರು. ಮಾಧ್ಯಮಗಳು ಕೂಡ ಈ ಹಿನ್ನಲೆಯಲ್ಲಿ ವರದಿಗಳನ್ನು ಪ್ರಸಾರ ಮಾಡಿದ್ದವು. ಹಾಗಾಗಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಸ್ಥಳಿಯ ಪಕ್ಷಗಳು ಚುನಾವಣಾ ಪ್ರಚಾರಸಭೆಗಳನ್ನು ಕೈ ಬಿಡುವ ನಿರ್ಧಾರ ಕೈಗೊಂಡಿವೆ.

ಈ ನಿಟ್ಟಿನಲ್ಲಿ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೇಸ್ ನಾಯಕಿ ಮಮತಾ ಬ್ಯಾನರ್ಜಿ ಕೂಡ ತಮ್ಮ ಚುನಾವಣಾ ರ್ಯಾಲಿಗಳಿಗೆ ಕಡಿವಾಣ ಹಾಕಿದ್ದಾರೆ. ಈಗ ಬಿಜೆಪಿ ಕೂಡ ಈ ನಿರ್ಧಾರ ಕೈಗೊಂಡಿದ್ದು ಡೊಡ್ಡ ಮಟ್ಟದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳವುದಿಲ್ಲವೆಂದು ಪಕ್ಷ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ನಿನ್ನೆ (ಏಪ್ರಿಲ್ 19) 8,426 ಕೊರೊನಾ ಪ್ರಕರಣಗಳು ದಾಖಲಾಗಿದ್ದು 38 ಜನ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದೆ.

Follow Us:
Download App:
  • android
  • ios