* ಸಣ್ಣಪುಟ್ಟಪಕ್ಷಗಳು, ಪಕ್ಷೇತರರ ಜತೆ ಬಿಜೆಪಿ ಸಂಪರ್ಕದಲ್ಲಿ* ಪ್ರಹ್ಲಾದ ಜೋಶಿ, ವಿಜಯವರ್ಗೀಯರಿಂದ ಡೆಹ್ರಾಡೂನಲ್ಲಿ ಸಭೆ* ಕಾಂಗ್ರೆಸ್‌ನಿಂದ ದೀಪೇಂದರ್ ಹೂಡಾ ರವಾನೆ, ರಾವತ್ ಜತೆ ಮಾತುಕತೆ
ಡೆಹ್ರಾಡೂನ್(ಮಾ.09): ಉತ್ತರಾಖಂಡದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದು ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮಂಗಳವಾರದಿಂದಲೇ ಗಹನ ಸಮಾಲೋಚನೆ ಆರಂಭಿಸಿವೆ.
ಡೆಹ್ರಾಡೂನ್‌ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ರಾಜ್ಯದ ಬಿಜೆಪಿ ಪ್ರಭಾರಿಯಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ಥಳೀಯ ಬಿಜೆಪಿ ನಾಯಕರ ಜತೆ ಮಂಗಳವಾರ ಸಮಾಲೋಚನೆ ನಡೆಸಿದ್ದಾರೆ. ಅತಂತ್ರ ಸ್ಥಿತಿ ಸೃಷ್ಟಿಯಾದರೆ ಯಾರ ಜತೈ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದು, ಗೆಲ್ಲುವ ಸಾಧ್ಯತೆ ಇರುವ ಸಣ್ಣಪುಟ್ಟಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳ ಜತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಕಮ್ಮಿ ಸ್ಥಾನ ಬರಬಹುದು ಎಂದಿದ್ದರೂ ಮಾ.10ರಂದು ಜಯ ನಮ್ಮದಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ದಿಲ್ಲಿಯಿಂದ ಸಂಸದ ದೀಪೇಂದರ್ ಹೂಡಾ ಅವರನ್ನು ವಿಶೇಷ ವೀಕ್ಷಕನಾಗಿ ಕಳಿಸಿದೆ. ಅವರು ರಾಜ್ಯ ಕಾಂಗ್ರೆಸ್ ಮುಖಂಡರಾದ ಹರೀಶ್ ರಾಆವತ್ ಹಾಗೂ ಪ್ರೀತಂ ಸಿಂಗ್ ಅವರ ಜತೆ ಸಭೆ ನಡೆಸಿ, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.
ಗೋವಾದಲ್ಲಿ ರೆಸಾರ್ಟ್ ರಾಜಕೀಯ ಶುರು
ಗೋವಾದಲ್ಲಿ ಯಾರಿಗೂ ಬಹುಮತ ಬಾರದೇ ಹೋಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಸುಳಿವು ನೀಡಿರುವ ಹಿನ್ನೆಲೆಯಲ್ಲಿ, ಸರ್ಕಾರ ರಚನೆಗೆ ಈಗಿನಿಂದಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕಸರತ್ತು ಆರಂಭಿಸಿವೆ.
ಕಾಂಗ್ರೆಸ್ ಪಕ್ಷದವರು ಎಲ್ಲ ಅಭ್ಯರ್ಥಿಗಳನ್ನು ಗೋವಾದ ರೆಸಾರ್ಟ್ ಒಂದರಲ್ಲಿ ಕೂಡಿ ಹಾಕಿದ್ದು, ಗೆದ್ದ ನಂತರ ತಮ್ಮವರ ಕುದುರೆ ವ್ಯಾಪಾರ ಆಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಇದೇ ವೇಳೆ, ‘ಬಿಜೆಪಿ ವಿರೋಧಿಗಳಾದ ಆಪ್, ಟಿಎಂಸಿ ಯಾರೇ ಆಗಲಿ ಅವರ ಜತೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಮೈತ್ರಿಗೆ ಸಿದ್ಧ’ ಎಂದು ಪಕ್ಷದ ಗೋವಾ ಪ್ರಭಾರಿ, ಕರ್ನಾಟಕ ಕಾಂಗ್ರೆಸ್ ಮುಖಂಡ ದಿನೇಶ್ ಗೂಂಡೂರಾವ್ ಹೇಳಿದ್ದಾರೆ. ಈ ಮೂಲಕ ತನ್ನ ಆಪ್, ಟಿಎಂಸಿ ವಿರೋಧಿ ನೀತಿಯನ್ನು ಕಾಂಗ್ರೆಸ್ ಸಡಿಲಿಸಿದೆ.
ಮತ್ತೊಂದೆಡೆ ಟಿಎಂಸಿ ರಾಜ್ಯ ಅಧ್ಯಕ್ಷ ಕಿರಣ್ ಕಾಕೋಂಡ್ಕರ್ ಅವರು ‘ಟಿಎಂಸಿ-ಎಂಜಿಪಿ ಮೈತ್ರಿಗೆ ರಾಜ್ಯದಲ್ಲಿ 11 ಸ್ಥಾನ ಬರಲಿವೆ. ನಮ್ಮ ಬೆಂಬಲ ಬಯಸಿದವರ ಜತೆ ನಂತರ ಸಮಾಲೋಚನೆ ಮಾಡಲಿದ್ದೇವೆ’ ಎಂದಿದ್ದಾರೆ. ರಾಜ್ಯಕ್ಕೆ ಟಿಎಂಸಿ ನಾಯಕರಾದ ಅಭಿಷೇಕ್ ಬ್ಯಾನರ್ಜಿ, ಡೆರಿಕ್ ಓ’ಬ್ರಿಯಾನ್, ಟಿಎಂಸಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೂಡ ಆಗಮಿಸಿದ್ದಾರೆ.
ಮೋದಿ ಭೇಟಿಯಾದ ಸಾವಂತ್:
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದಿಲ್ಲಿಗೆ ತೆರಳಿ ತಮ್ಮ ಸರ್ಕಾರ ರಚನೆ ಕಾರ್ಯತಂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹಾಗೂ ಮುಂಬೈನಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ‘ಎಂಜಿಪಿ ಜತೆ ಮೈತ್ರಿಗೆ ಬಿಜೆಪಿ ಸಿದ್ಧ’ ಎಂದಿದ್ದಾರೆ.
ಆದರೆ, ‘ನಮ್ಮನ್ನು ಈ ಹಿಂದೆ ಸಂಪುಟದಿಂದ ಕೈಬಿಟ್ಟಿದ್ದ ಸಾವಂತ್ ಮತ್ತೆ ಸಿಎಂ ಆಗದಿದ್ದರೆ ಮಾತ್ರ ಬಿಜೆಪಿಗೆ ಬೆಂಬಲಿಸುವ ಬಗ್ಗೆ ಯೋಚಿಸುತ್ತೇವೆ’ ಎಂದು ಎಂಜಿಪಿ ನಾಯಕ ಸುದಿನ್ ಧಾವಳೀಕರ್ ಸ್ಪಷ್ಟಪಡಿಸಿದ್ದಾರೆ. ಆದರೆ, ‘ಇನ್ನೊಂದು ಪಕ್ಷದ ಸಿಎಂ ಉಮೇದುವಾರರ ಬಗ್ಗೆ ಎಂಜಿಪಿಗೆ ಮಾತಾಡುವ ಹಕ್ಕಿಲ್ಲ’ ಎಂದು ಸಾವಂತ್ ತಿರುಗೇಟು ನೀಡಿದ್ದಾರೆ.
ಈ ನಡುವೆ ಬುಧವಾರ ರಾಜ್ಯಕ್ಕೆ ಫಡ್ನವೀಸ್ ಹಾಗೂ ರಾಜ್ಯ ಬಿಜೆಪಿ ಪ್ರಭಾರಿ ಸಿ.ಟಿ. ರವಿ ಆಗಮಿಸಲಿದ್ದಾರೆ.
