ಬೋಲ್‌ಪುರ(ಡಿ.21): ಓಲೈಕೆ ರಾಜಕಾರಣದಲ್ಲಿ ನಂಬಿಕೆ ಹೊಂದಿರುವ ತೃಣಮೂಲ ಕಾಂಗ್ರೆಸ್ಸಿನಿಂದ ಬಾಂಗ್ಲಾ ವಲಸಿಗರ ವಲಸೆಯನ್ನು ತಡೆಯಲು ಎಂದಿಗೂ ಆಗುವುದಿಲ್ಲ. ಆ ಕೆಲಸ ಏನಿದ್ದರೂ ಬಿಜೆಪಿಯಿಂದ ಮಾತ್ರ ಸಾಧ್ಯ. ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಬಳಿಕ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿಯ ನಂ.2 ನಾಯಕ ಅಮಿತ್‌ ಶಾ ಹೇಳಿದ್ದಾರೆ.

ಏಪ್ರಿಲ್‌- ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ 2ನೇ ದಿನವೂ ರೋಡ್‌ ಶೋ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಗಾಳದ ಜನ ಬದಲಾವಣೆ ಬಯಸಿದ್ದಾರೆ. ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ, ಸುಲಿಗೆ ಹಾಗೂ ಬಾಂಗ್ಲಾದೇಶೀಯರ ವಲಸೆಯಿಂದ ಮುಕ್ತಿ ಬಯಸಿದ್ದಾರೆ ಎಂದು ಹೇಳಿದರು.

ಬಂಗಾಳಕ್ಕೆ ಬಂಗಾರದ ಬಂಗಾಳ ಎಂಬ ವೈಭವ ಇತ್ತು. ಬಿಜೆಪಿ ಗೆದ್ದರೆ ಅದನ್ನು ಮರುಸ್ಥಾಪಿಸುತ್ತೇವೆ. ನನ್ನ ಜೀವನದಲ್ಲಿ ಹಲವು ರೋಡ್‌ ಶೋಗಳಲ್ಲಿ ಭಾಗವಹಿಸಿದ್ದೇನೆ ಹಾಗೂ ಸಂಘಟಿಸಿದ್ದೇನೆ. ಆದರೆ ರೋಡ್‌ ಶೋವೊಂದರಲ್ಲಿ ಇಷ್ಟೊಂದು ಜನರನ್ನು ನನ್ನ ಜೀವನದಲ್ಲೇ ನೋಡಿಲ್ಲ. ಮಮತಾ ಸರ್ಕಾರದ ಮೇಲೆ ಇರುವ ಜನತೆಯ ಆಕ್ರೋಶವನ್ನು ಇದು ತೋರಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಅಜೆಂಡಾ ಮೇಲೆ ಜನರು ವಿಶ್ವಾಸವಿಟ್ಟಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಾಹನದ ಮೇಲೆ ಇತ್ತೀಚೆಗೆ ನಡೆದ ದಾಳಿಯ ವಿಚಾರವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್‌ ಶಾ ತೀವ್ರ ವಾಗ್ದಾಳಿ ನಡೆಸಿದರು. ಬ್ಯಾನರ್ಜಿ ಅವರು ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರೀಯ ನಿಯೋಜನೆಗೆ ಐಪಿಎಸ್‌ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳುವ ಸಂಬಂಧ ರಾಜ್ಯಗಳಿಗೆ ಪತ್ರ ಬರೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಈ ಬಗ್ಗೆ ಅನುಮಾನ ಇದ್ದರೆ ನಿಯಮ ಪುಸ್ತಕ ಓದಬಹುದು ಎಂದು ಹೇಳಿದರು.

ಮಮತಾ ಅವರು ಹೊರಗಿನವರು- ಒಳಗಿನವರು ಎಂಬ ವಿಷಯ ಪ್ರಸ್ತಾಪಿಸಿ, ಸರ್ಕಾರದ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಣ್ಣಿನ ಮಗನನ್ನೇ ಮುಖ್ಯಮಂತ್ರಿ ಮಾಡಲಾಗುವುದು ಎಂದು ತಿಳಿಸಿದರು.

ಆಷ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವುದು ಸಿಎಎ ತಿರುಳಾಗಿದೆ.