ಡೆಲ್ಲಿ ಮಂಜು, ಇಂಡಿಯಾ ರೌಂಡ್ಸ್

ನವದೆಹಲಿ(ಏ.07): ಬಿಜೆಪಿ ಆಂತರೀಕ ಮೌಲ್ಯಮಾಪನದಲ್ಲಿ ಪಶ್ಚಿಮ ಬಂಗಾಳದ `ನಂದಿಗ್ರಾಮ' ವಿಧಾನಸಭಾ ಕ್ಷೇತ್ರ ಯಾವ ಕ್ಯಾಟಗರಿಯಲ್ಲಿದೆ ? ಇದು ಈಗ ನಡೆಯುತ್ತಿರುವ ಬಿಸಿಬಿಸಿ ಚರ್ಚೆ. 294 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಿತಿ ಹೇಗಿದೆ ಅನ್ನೋದು ಪಕ್ಷದ ಚುನಾವಣಾ ತಂತ್ರಗಾರರು ವಿಂಗಡಣೆ ಮಾಡಿ, ಯಾವ ಕ್ಷೇತ್ರಕ್ಕೆ ಎಷ್ಟು ಶ್ರಮ ಹಾಕಬೇಕು. ಅಲ್ಲಿ ಗೆಲ್ಲಲೂ ಹೇಗೆ ತಂತ್ರಗಾರಿಕೆ ಮಾಡಬೇಕು ಅನ್ನೋದರ ಕುರಿತು ಯೋಜನೆ ರೂಪಿಸಿಕೊಟ್ಟಿದ್ದಾರೆ.

ಅದು ನಂದಿಗ್ರಾಮ ಕ್ಷೇತ್ರವಿರಲಿ, ಸೀತಾಳ, ರಾಯಪುರ್ ಅಥವಾ ತಾರಕೇಶ್ವರ್ ಕ್ಷೇತ್ರವಾಗಲಿ ಅಲ್ಲಿ ಗೆಲುವು ಸಾಧಿಸಬೇಕು ಅಷ್ಟೆ ಇದು ಕಾರ್ಯಕರ್ತರಿಗೆ, ಮುಖಂಡರಿಗೆ ಅಥವಾ ಅಭ್ಯರ್ಥಿಗಳಿಗೆ ಕೊಟ್ಟಿರುವ ಒನ್ ವರ್ಡ್ ಟಾಸ್ಕ್. ಇಷ್ಟಕ್ಕೂ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳನ್ನು ಎ,ಬಿ,ಸಿ ಅಂತ 3 ಕ್ಯಾಟಗರಿಗಳಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ. ಕ್ಷೇತ್ರಕ್ಕೆ ತಕ್ಕಂತೆ ಗೆಲುವಿನ ಸೂತ್ರವನ್ನು ಬಿಜೆಪಿ ತಂತ್ರಗಾರಿಕಾ ಟೀಂ ರೂಪಿಸಿದೆ.

ನಂದಿಗ್ರಾಮ ಯಾವ ಕ್ಯಾಟಗರಿಯಲ್ಲಿದೆ ? : ನಂದಿಗ್ರಾಮ ಕ್ಷೇತ್ರ ಈಗ ಇಬ್ಬರಿಗೂ ( ಟಿಎಂಸಿ ಮತ್ತು ಬಿಜೆಪಿ) ಸವಾಲಿನ ಕ್ಷೇತ್ರ. ಹಾಲಿ ಸಿಎಂ ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷದಿಂದ ಮತ್ತು ದೀದಿಯ ಒಂದು ಕಾಲದ ಆಪ್ತ ಸುವೇಂದು ಅಧಿಕಾರಿ ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ. ಏಪ್ರಿಲ್ 1 ರಂದು ನಡೆದ 2ನೇ ಹಂತದ ಚುನಾವಣೆಯಲ್ಲಿ ಬಂದ ಮತಗಳು ಈಗ ಇವಿಎಂ ಪಟ್ಟೆಗೆಯಲ್ಲಿ ಸುಭದ್ರವಾಗಿವೆ. ಆದರೆ ಇಬ್ಬರಿಗೂ ಗೆಲುವು ಮಾತ್ರ ಸುಲಭವಲ್ಲ ಅನ್ನೋದು ಬಹಳ ಮುಖ್ಯ. 

`ಎ' ಕ್ಯಾಟಗರಿ ಅಂದರೆ ಸುಲಭವಾಗಿ ಜಯ ದೊರೆಯುವ ಕ್ಷೇತ್ರ, `ಬಿ' ಹೋರಾಟದ ಮೂಲಕ ಗೆಲುವು ಸಾಧಿಸೋದು ಮತ್ತು `ಸಿ' ಗೆಲುವು ಕಠಿಣ ಹೀಗೆ ಬಿಜೆಪಿ ವಿಂಗಡಣೆ ಮಾಡಿಕೊಂಡಿರುವ ಆಂತರೀಕ ಮೌಲ್ಯಮಾಪನದಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರ `ಬಿ' ಕ್ಯಾಟಗರಿಯಲ್ಲಿದೆ. ಅಂದರೆ ಹೋರಾಟದ ಮೂಲಕ ನೆಕ್ ಟು ನೆಕ್ ಫೈಟ್ ಪಟ್ಟಿಯಲ್ಲಿದೆ. ಪಶ್ಚಿಮ ಬಂಗಾಳ ಅಷ್ಟು ಸುಲಭಕ್ಕೆ ತುತ್ತಲ್ಲ ಅನ್ನೋದು ಬಿಜೆಪಿಗೆ ಮನವರಿಕೆ ಇದೆ. ಮೊದಲ ಬಾರಿಗೆ ಹೆಚ್ಚುಕಡಿಮೆ 80 ಸಾವಿರದಿಂದ ಒಂದು ಲಕ್ಷ ಬೂತ್‍ಗಳಿಗೆ ಬಿಜೆಪಿ ಪಕ್ಷ ತಲುಪಿದೆ ಎನ್ನುತ್ತೆ ಬಿಜೆಪಿ ತಂತ್ರಗಾರಿಕಾ ಟೀಂ.