ಅಬಕಾರಿ ಹಗರಣದ ಬಳಿಕ 'ಪ್ಯಾನಿಕ್ ಬಟನ್ ಸ್ಕ್ಯಾಮ್' ಬಲೆಯಲ್ಲಿ ಸಿಲುಕಿದ ದೆಹಲಿಯ ಆಪ್ ಸರ್ಕಾರ?
ಅಬಕಾರಿ ಹಗರಣದ ಕಾರಣಕ್ಕಾಗಿ ತನ್ನ ಪ್ರಮುಖ ನಾಯಕರನ್ನು ಕಳೆದುಕೊಂಡಿರುವ ದೆಹಲಿಯ ಆಪ್ ಸರ್ಕಾರದ ವಿರುದ್ಧ ಬಿಜೆಪಿ 'ಪ್ಯಾನಿಕ್ ಬಟನ್ ಸ್ಕ್ಯಾಮ್' ಆರೋಪ ಹೊರಿಸಿದೆ. ಇದರಲ್ಲಿ 500 ಕೋಟಿ ರೂಪಾಯಿಯ ಹಗರಣ ನಡೆದಿದೆ ಎಂದು ಹೇಳಿದೆ.
ನವದೆಹಲಿ (ಆ.2): ಬಹುಚರ್ಚಿತ ಅಬಕಾರಿ ಹಗರಣದಿಂದಾಗಿ ತನ್ನ ಪ್ರಮುಖ ನಾಯಕರಾದ ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಅವರನ್ನು ಕಳೆದುಕೊಂಡಿರುವ ಆಮ್ ಆದ್ಮಿ ಪಾರ್ಟಿ ವಿರುದ್ಧ ಬಿಜೆಪಿ ಮತ್ತೊಂದು ದೊಡ್ಡ ಆರೋಪ ಹೊರಿಸಿದೆ. ಅಬಕಾರಿ ಹಗರಣದ ಬಳಿಕ ದೆಹಲಿಯ ಆಪ್ ಸರ್ಕಾರದ ವಿರುದ್ಧ ಇನ್ನೊಂದು ಬಹುಕೋಟಿ ಹಗರಣದ ಆರೋಪವನ್ನು ಬಿಜೆಪಿ ಮಾಡಿದೆ. ದೆಹಲಿ ಬಸ್ ಹಾಗೂ ಟ್ಯಾಕ್ಸಿಗಳಲ್ಲಿ ಹಾಕಲಾಗಿರುವ ಪ್ಯಾನಿಕ್ ಬಟನ್‌ಗಳಲ್ಲಿ ಆಪ್ ಸರ್ಕಾರ ದೊಡ್ಡ ಹಗರಣ ನಡೆಸಿದ್ದು, ಇದನ್ನು ಪ್ಯಾನಿಕ್ ಬಟನ್ ಸ್ಕ್ಯಾಮ್ ಎಂದು ಹೆಸರಿಸಿದೆ. ಭ್ರಷ್ಟಾಚಾರ ನಿಗ್ರಹ ದಳವು ಪ್ಯಾನಿಕ್ ಬಟನ್‌ಗಳ ಲೆಕ್ಕಪರಿಶೋಧನೆ ನಡೆಸುತ್ತಿದೆ ಎಂಬ ಮಾಧ್ಯಮ ವರದಿಗಳ ನಂತರ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಪ್ಯಾನಿಕ್ ಬಟನ್ ಹೆಸರಿನಲ್ಲಿ ದೆಹಲಿ ಸಾರಿಗೆ ಇಲಾಖೆ ಕೋಟ್ಯಂತರ ರೂಪಾಯಿ ಹಗರಣವನ್ನು ಮಾಡಿದೆ ಎಂದು ಆರೋಪಿಸಿದ್ದಾರೆ. ಈ ನಡುವೆ, ದೆಹಲಿಯ ಬಸ್‌ಗಳು ಮತ್ತು ಟ್ಯಾಕ್ಸಿಗಳಲ್ಲಿನ ಎಲ್ಲಾ ಸುರಕ್ಷತಾ ಕಾರ್ಯಗಳು ಮತ್ತು ಪ್ಯಾನಿಕ್ ಬಟನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ದಿನವಿಡೀ ಬಿಗಿಯಾದ ಕಣ್ಗಾವಲು ನಡೆಸುತ್ತಿದೆ ಎಂದು ಹೇಳುವ ಮೂಲಕ ಆಪ್ ಸರ್ಕಾರ ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದೆ.
ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳವು ಪ್ಯಾನಿಕ್ ಬಟನ್ ವಿಚಾರವಾಗಿ ಆಡಿಟ್ ನಡೆಸುತ್ತಿದೆ ಎನ್ನುವ ವಿಚಾರವನ್ನೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಅಲ್ಲಗಳೆದಿದ್ದು, ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದೆ. ಆಡಿಟ್ ಮಾಡುವಾಗ ತಾಂತ್ರಿಕ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆಯೇ ಅಥವಾ ಲೆಕ್ಕಪರಿಶೋಧನೆಯನ್ನು ಹೊಣೆ ಹೊತ್ತಿರುವ ವ್ಯಕ್ತಿಗಳು ತಾಂತ್ರಿಕವಾಗಿ ಹಾಗೆ ಮಾಡಲು ಅರ್ಹರಾಗಿದ್ದಾರೆಯೇ ಎನ್ನುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಪ್ ಸರ್ಕಾರ ಪ್ರಶ್ನೆ ಎತ್ತಿದೆ.
ಏನಿದು 500 ಕೋಟಿ ವಂಚನೆಯ ‘ಪ್ಯಾನಿಕ್ ಬಟನ್ ಹಗರಣ’?: ದೆಹಲಿ ಬಿಜೆಪಿಯ ಆರೋಪಗಳ ಪ್ರಕಾರ, ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಈ ವಾಹನಗಳ ಮಾಲೀಕರಿಂದ ನಾಮಮಾತ್ರ ಶುಲ್ಕವನ್ನು ವಿಧಿಸುವ ಮೂಲಕ ಟ್ಯಾಕ್ಸಿಗಳು ಮತ್ತು ಬಸ್‌ಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಿದೆ.
ದಿಲ್ಲಿ ಅಬಕಾರಿ ಹಗರಣ: ಭ್ರಷ್ಟಾಚಾರದಲ್ಲಿ ಆಪ್, ಬಿಆರ್‌ಎಸ್ ಏಕತೆ: ಮೋದಿ ಚಾಟಿ
ಪ್ರಯಾಣಿಕರ ಸುರಕ್ಷತೆಗಾಗಿ ಟ್ಯಾಕ್ಸಿಗಳು ಮತ್ತು ಬಸ್‌ಗಳ ಮಾಲೀಕರಿಗೆ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲು ಆಪ್ ಸರ್ಕಾರ ಶುಲ್ಕ ವಿಧಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ ಮತ್ತು ಪ್ಯಾನಿಕ್ ಬಟನ್ ಶುಲ್ಕ ಎಂದು ಈವರೆಗೂ 500 ಕೋಟಿ ರೂಪಾಯಿಗಳನ್ನು ಸರ್ಕಾರ ಕಲೆಕ್ಷನ್ ಮಾಡಿದೆ. ಆದರೆ, ಸರ್ಕಾರ ಹಾಕಿರುವ ಈ ಪ್ಯಾನಿಕ್ ಬಟನ್‌ಗಳು ಹೆಚ್ಚಿನವರು ನಕಲಿಯಾಗಿದ್ದು, ಇನ್ನೂ ಕೆಲವು ಬಟನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಸಿಸೋಡಿಯಾ ನೆನೆದು ಕೇಜ್ರಿವಾಲ್ ಕಣ್ಣೀರು: 103 ದಿನದ ನಂತರ ಪತ್ನಿ ಭೇಟಿ ಮಾಡಿದ ಸಿಸೋಡಿಯಾ
ದೆಹಲಿಯ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಅಳವಡಿಸಲಾಗಿರುವ ಪ್ಯಾನಿಕ್ ಬಟನ್‌ಗಳು ನಿಷ್ಕ್ರಿಯವಾಗಿವೆ. ಹಾಗಾಗಿ ನಿಮಗೆ ಏನಾದರೂ ಸಮಸ್ಯೆ ಆದಲ್ಲಿ ಪ್ಯಾನಿಕ್ ಬಟನ್ ಒತ್ತುವ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಅಲರ್ಟ್ ನೀಡಬಹುದು ಎನ್ನುವ ಎಚ್ಚರಿಕೆಯಲ್ಲಿರಬೇಡಿ. ಇದರಲ್ಲಿ ಅಂದಾಜು 500 ಕೋಟಿ ರೂಪಾಯಿಯ ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.