* ದೇಶದ ಅಭಿವೃದ್ಧಿಗೆ ಮೋದಿ 60 ಅಂಶಗಳ ಪ್ಲಾನ್‌* ಜನ್ಮ ಪ್ರಮಾಣ ಪತ್ರದ ಆಧಾರದ ಮೇಲೆ ನಾಗರಿಕತ್ವ ಗುರುತು* ಎಲ್ಲಾ ಕಾಯ್ದೆ ರದ್ದುಪಡಿಸಿ ಒಂದೇ ಪರಿಸರ ಕಾಯ್ದೆ ರಚನೆ* ವಿಯೆಟ್ನಾಂ, ಇಂಡೋನೇಷ್ಯಾ ರೀತಿ ಉದ್ದಿಮೆಗಳಿಗೆ ಒಪ್ಪಿಗೆ* ರಾಜ್ಯ, ಕೇಂದ್ರದಲ್ಲಿ ನಾಗರಿಕ ಸೇವೆಗಳನ್ನು ಸುಧಾರಿಸಲು ಕ್ರಮ

ನವದೆಹಲಿ(ಅ.20): ದೇಶದಲ್ಲಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದು, ಉದ್ದಿಮೆಗಳ ಸ್ಥಾಪನೆಗೆ ಅನುಮತಿ ಸರಳಗೊಳಿಸುವುದು, ನಾಗರಿಕತ್ವದ(Citizenship) ದಾಖಲೆಯೊಂದನ್ನು ಜಾರಿಗೆ ತರುವುದೂ ಸೇರಿದಂತೆ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದ 60 ಅಂಶಗಳ ಕ್ರಿಯಾಯೋಜನೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ(Narenfdra Modi) ಸಿದ್ಧಪಡಿಸಿದ್ದಾರೆ.

ಸೆ.18ರಂದು ಪ್ರಧಾನಿ ಎಲ್ಲಾ ಸಚಿವಾಲಯ ಹಾಗೂ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಮ್ಯಾರಥಾನ್‌ ಸಭೆಗಳನ್ನು ನಡೆಸಿದ್ದರು. ಆ ಸಭೆಗಳಲ್ಲಿ ಅವರು ಸಂಗ್ರಹಿಸಿದ ಮಾಹಿತಿಯನ್ನು ಕ್ರೋಢೀಕರಿಸಿ 60 ಅಂಶಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಿ, ಆಯಾ ಇಲಾಖೆಗೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ಕೂಡಲೇ ಜಾರಿಗೊಳಿಸುವಂತೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೋದಿ ಸಿದ್ಧಪಡಿಸಿದ ಕ್ರಿಯಾಯೋಜನೆಯಲ್ಲಿ ಮುಖ್ಯವಾಗಿ 3 ಅಂಶಗಳಿವೆ:

1. ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು.

2. ದೇಶದಲ್ಲಿ ಔದ್ಯೋಗಿಕ ವಾತಾವರಣವನ್ನು ಸುಧಾರಿಸುವುದು.

3. ರಾಜ್ಯ, ಕೇಂದ್ರದಲ್ಲಿ ನಾಗರಿಕ ಸೇವೆಯನ್ನು ಮೇಲ್ದರ್ಜೆಗೇರಿಸುವುದು.

ನಾಗರಿಕತ್ವಕ್ಕೆ ದಾಖಲೆ:

ಸದ್ಯ ನಮ್ಮ ದೇಶದಲ್ಲಿ ಪೌರತ್ವಕ್ಕೆ ಸ್ಪಷ್ಟದಾಖಲೆ ಇಲ್ಲ. ಹೀಗಾಗಿ ಜನನ ಪ್ರಮಾಣ ಪತ್ರದ ಆಧಾರದ ಮೇಲೆ ಪೌರತ್ವಕ್ಕೆ ಮಾನ್ಯತೆ ನೀಡುವ ಬಗ್ಗೆ ಯೋಜನೆ ರೂಪಿಸಲು ಮೋದಿ ಸೂಚಿಸಿದ್ದಾರೆ.

ನಾನಾ ಪರಿಸರ ಕಾಯ್ದೆಗಳು ರದ್ದು:

ದೇಶದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಹಲವಾರು ಕಾಯ್ದೆಗಳಿವೆ. ಇವು ಉದ್ದಿಮೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತವೆ. ಹೀಗಾಗಿ ಎಲ್ಲಾ ಪರಿಸರ ಕಾಯ್ದೆಗಳನ್ನು ಸೇರಿಸಿ ಸಮಗ್ರವಾಗಿ ಒಂದೇ ಸರಳ ಪರಿಸರ ಕಾಯ್ದೆ ರೂಪಿಸಲು ಪ್ರಧಾನಿ ಸೂಚಿಸಿದ್ದಾರೆ.

ಮಾಹಿತಿ ತಂತ್ರಜ್ಞಾನದ ಬಳಕೆ:

ಎಲ್ಲಾ ಇಲಾಖೆಗಳೂ ತಮ್ಮೆಲ್ಲಾ ಯೋಜನೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ದಕ್ಷವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ ಸುಲಭಗೊಳಿಸಬೇಕು. ಬಡ ವಿದ್ಯಾರ್ಥಿಗಳಿಗೆ ನೀಡಲು ದೇಶೀ ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳನ್ನು ಸಿದ್ಧಪಡಿಸಬೇಕು. ಭೂ ದಾಖಲೆಗಳನ್ನು ಗಣಕೀಕರಣಗೊಳಿಸಬೇಕು ಎಂದು ಕ್ರಿಯಾಯೋಜನೆಯಲ್ಲಿ ಸೂಚಿಸಲಾಗಿದೆ.

ಕ್ರೀಡೆಗೆ ಒಡಿಶಾ ಮಾದರಿ:

ಎಲ್ಲಾ ಇಲಾಖೆಗಳು ಬೇರೆ ಬೇರೆ ಕಡೆಯಿಂದ ಯಶಸ್ವಿ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ, ಕ್ರೀಡಾ ಸಚಿವಾಲಯವು ದೇಶದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡಲು ಒಡಿಶಾ ಮಾದರಿಯನ್ನು ಬಳಸಿಕೊಳ್ಳಬೇಕು ಎಂದು ಮೋದಿ ಸೂಚಿಸಿದ್ದಾರೆ.

5 ವರ್ಷದಲ್ಲಿ ಬಡತನ ನಿರ್ಮೂಲನೆ:

ನೀತಿ ಆಯೋಗವು ದೇಶದಲ್ಲಿ 5 ವರ್ಷದಲ್ಲಿ ಬಡತನ ನಿರ್ಮೂಲನೆಗೆ ಯೋಜನೆ ರೂಪಿಸಬೇಕು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೊಳಗೇರಿಗಳನ್ನು ನಿರ್ಮೂಲನೆ ಮಾಡಿ ಬಡವರಿಗೆ ವಸತಿ ಕಲ್ಪಿಸಬೇಕು. ಎಲ್ಲಾ ಸರ್ಕಾರಿ ದತ್ತಾಂಶಗಳು ಎಲ್ಲಾ ಸಚಿವಾಲಯಗಳಿಗೆ ಒಂದೇ ಕಡೆ ಸಿಗುವಂತಿರಬೇಕು ಎಂದೂ ಪ್ರಧಾನಿ ಹೇಳಿದ್ದಾರೆ.

ಇಂಡೋನೇಷ್ಯಾ, ವಿಯೆಟ್ನಾಂ ಮಾದರಿ:

ದೇಶಕ್ಕೆ ಉದ್ದಿಮೆಗಳನ್ನು ಆಕರ್ಷಿಸಲು ಕೆಲ ಅನಗತ್ಯ ಅನುಮತಿಗಳನ್ನು ರದ್ದುಪಡಿಸಬೇಕು. ವಿಯೆಟ್ನಾಂ ಹಾಗೂ ಇಂಡೋನೇಷ್ಯಾ ರೀತಿಯಲ್ಲಿ 10 ಕ್ಷೇತ್ರಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವ ವೆಚ್ಚ ಕಡಿತಗೊಳಿಸಲು, ಉದ್ದಿಮೆಗಳಿಗೆ ಸ್ವಯಂಚಾಲಿತ ಅನುಮತಿ ನೀಡಲು ಹಾಗೂ ಎಲ್ಲಾ ಸರ್ಕಾರಿ ಸೇವೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ತರಲು ಕ್ರಮ ಕೈಗೊಳ್ಳಬೇಕು. ಕಾಲಮಿತಿಯಲ್ಲಿ ಪರಿಸರ ಅನುಮೋದನೆ ನೀಡುವ ಹಾಗೂ ಭೂಸ್ವಾಧೀನ ಮಾಡಿಕೊಳ್ಳುವ ರಾಜ್ಯಗಳಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಮೋದಿ ಸೂಚಿಸಿದ್ದಾರೆ.