ಬೆಂಗಳೂರಿನ ಬಯೋಕಾನ್‌ ಸಂಸ್ಥೆಯ ಮಹಿಳಾ ಉದ್ಯೋಗಿ ಪ್ರಿಯಾಂಕಾ ಮೊಹಿತೆ| ವಿಶ್ವದ 10ನೇ ಎತ್ತರದ ಶಿಖರವೇರಿದ ಬೆಂಗಳೂರು ಬಯೋಕಾನ್‌ ಉದ್ಯೋಗಿ!

ಮುಂಬೈ(ಏ.21): ಬೆಂಗಳೂರಿನ ಬಯೋಕಾನ್‌ ಸಂಸ್ಥೆಯ ಮಹಿಳಾ ಉದ್ಯೋಗಿ ಪ್ರಿಯಾಂಕಾ ಮೊಹಿತೆ ಅವರು ವಿಶ್ವದ 10ನೇ ಅತೀ ಎತ್ತರದ ‘ಅನ್ನಪೂರ್ಣ’ ಪರ್ವತವೇರಿ ಸಾಧನೆಗೈದಿದ್ದಾರೆ. ತನ್ಮೂಲಕ ಈ ಸಾಧನೆಗೈದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪ್ರಿಯಾಂಕಾ ಪಾತ್ರರಾಗಿದ್ದಾರೆ.

ಪ್ರಿಯಾಂಕಾ ಅವರು ಮೂಲತಃ ಮಹಾರಾಷ್ಟ್ರದ ಸತಾರದವರು. ಈ ಸಂಬಂಧ ಟ್ವೀಟ್‌ ಮಾಡಿರುವ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜೂಂದಾರ್‌ ಶಾ ಅವರು, ‘ನೇಪಾಳದಲ್ಲಿರುವ 8091 ಮೀಟರ್‌ನ ವಿಶ್ವದ 10ನೇ ಎತ್ತರದ ಅನ್ನಪೂರ್ಣ ಶಿಖರವನ್ನು ಏ.16ರಂದು ಏರಿದ್ದಾರೆ. ಈ ಸಾಧನೆಗೈದ ಮೊದಲ ಭಾರತೀಯ ಮಹಿಳೆಯಾದ ಪ್ರಿಯಾಂಕಾ ಬಗ್ಗೆ ಹೆಮ್ಮೆಯಿದೆ’ ಎಂದು ಹರ್ಷಿಸಿದ್ದಾರೆ.

Scroll to load tweet…

158 ಪರ್ವತಾರೋಹಿಗಳ ಪೈಕಿ ಮಾರ್ಗಮಧ್ಯೆದಲ್ಲೇ 58 ಮಂದಿ ಮೃತಪಟ್ಟಿರುವ ಇತಿಹಾಸ ಹೊಂದಿರುವ ಅನ್ನಪೂರ್ಣ ಶಿಖರವು ಹಾನಿಕಾರ ಎಂಬ ಕುಖ್ಯಾತಿ ಪಡೆದಿದೆ. 2013ರಲ್ಲಿ ವಿಶ್ವದ ಅತೀ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್‌(8849 ಮೀಟರ್‌) ಅನ್ನು ಹತ್ತಿದ್ದರು. ಅಲ್ಲದೆ 2016ರಲ್ಲಿ ಕಿಲಿಮಂಜಾರೋ(5895 ಮೀಟರ್‌), 2018ರಲ್ಲಿ ಮೌಂಟ್‌ ಮಕಲು(8485 ಮೀಟರ್‌) ಹಾಗೂ ಮೌಂಟ್‌ ಲೋಟ್ಸೆ(8516 ಮೀಟರ್‌) ಶಿಖರಗಳನ್ನು ಹತ್ತಿದ್ದರು.