* ಬಿಲ್‌ ಗೇಟ್ಸ್‌, ವಿಶ್ವಬ್ಯಾಂಕ್‌ ಅಧ್ಯಕ್ಷ ಸೇರಿ ಹಲವು ಗಣ್ಯರು ಭಾಗಿ* ಪರಿಸರಸ್ನೇಹಿ ಜೀವನಶೈಲಿಯ ಜಾಗತಿಕ ಆಂದೋಲನಕ್ಕೆ ಇಂದು ಮೋದಿ ಚಾಲನೆ

ನವದೆಹಲಿ(ಜೂ.05): ಎಲ್ಲರೂ ಪರಿಸರಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಅರಿವು ಮೂಡಿಸುವ ‘ಲೈಫ್‌ಸ್ಟೈಲ್‌ ಫಾರ್‌ ದಿ ಎನ್ವಿರಾನ್ಮೆಂಟ್‌’ (ಲೈಫ್‌) ಎಂಬ ಮಹತ್ವಾಕಾಂಕ್ಷಿ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ವಿಶ್ವ ಪರಿಸರ ದಿನದಂದು ಸಂಜೆ 6 ಗಂಟೆಗೆ ನಡೆಯಲಿರುವ ಈ ವರ್ಚುವಲ್‌ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್‌್ಟಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌, ವಿಶ್ವ ಬ್ಯಾಂಕ್‌ ಅಧ್ಯಕ್ಷ ಡೇವಿಡ್‌ ಮಲ್ಪಾಸ್‌ ಸೇರಿದಂತೆ ಜಾಗತಿಕ ಮಟ್ಟದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಏರುತ್ತಿರುವ ತಾಪಮಾನ ಹಾಗೂ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಲು ಜನರು ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯವಿದೆ. ಇದಕ್ಕಾಗಿ ಲೈಫ್‌ ಎಂಬ ಜಾಗತಿಕ ಆಂದೋಲನವನ್ನು ಭಾರತ ಆರಂಭಿಸಲಿದೆ ಎಂದು ಕಳೆದ ವರ್ಷ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗದಲ್ಲಿ ಮೋದಿ ಘೋಷಿಸಿದ್ದರು. ಆ ಆಂದೋಲನಕ್ಕೆ ಇದೀಗ ಚಾಲನೆ ನೀಡಲಾಗುತ್ತಿದ್ದು, ಪರಿಸರ ಉಳಿಸುವ ವಿಶ್ವ ಮಟ್ಟದ ಹೋರಾಟದ ನೇತೃತ್ವವನ್ನು ಭಾರತ ವಹಿಸಿಕೊಳ್ಳಲಿದೆ.

ಭೂಮಿಯಲ್ಲಿ ಸಿಗುವ ಸಂಪನ್ಮೂಲಗಳನ್ನು ಹಾಗೂ ನಾವು ತಯಾರಿಸುವ ವಸ್ತುಗಳನ್ನು ಜನರು ವಿವೇಚನೆರಹಿತವಾಗಿ ಉಪಭೋಗಿಸುವುದರ ಬದಲು ಬಹಳ ಎಚ್ಚರಿಕೆಯಿಂದ ಬಳಸುವ ಬಗ್ಗೆ ‘ಲೈಪ್‌’ ಆಂದೋಲನದ ಮೂಲಕ ಅರಿವು ಮೂಡಿಸಲಾಗುತ್ತದೆ.