Multidimensional Poverty Index : ಬಿಹಾರ, ಜಾರ್ಖಂಡ್, ಉತ್ತರಪ್ರದೇಶ ದೇಶದ ಅತಿ ಬಡರಾಜ್ಯಗಳು!
*ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ
*ಬಿಹಾರದ ಜನಸಂಖ್ಯೆಯಲ್ಲಿ ಶೇ.51ರಷ್ಟುಜನ ಬಡವರು
*ಜಾರ್ಖಂಡ್ ನಂ.2, ಉ.ಪ್ರ. ನಂ.3 ಬಡರಾಜ್ಯಗಳು
*ಶೇ.13ರಷ್ಟುಬಡವರ ಹೊಂದಿರುವ ಕರ್ನಾಟಕ ನಂ.19 ಬಡರಾಜ್ಯ
*ಕೇರಳ, ಗೋವಾದಲ್ಲಿ ದೇಶದಲ್ಲಿ ಅತಿ ಕಮ್ಮಿ ಕಡುಬಡವರು
ನವದೆಹಲಿ(ನ.27): ನೀತಿ ಆಯೋಗದ ‘ಬಹುಆಯಾಮದ ಬಡತನ ವರದಿ’(Multidimensional Poverty Index) ಯಲ್ಲಿ ಬಿಹಾರ (Bihar), ಜಾರ್ಖಂಡ್ (Jharkhand) ಹಾಗೂ ಉತ್ತರ ಪ್ರದೇಶಗಳು (Uttar Pradesh) ದೇಶದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ. ಕರ್ನಾಟಕ (Karnataka) ಬಡತನದಲ್ಲಿ 19ನೇ ಸ್ಥಾನ ಪಡೆದಿದೆ. ಶುಕ್ರವಾರ ಬಿಡುಗಡೆ ಆದ ಸೂಚ್ಯಂಕ ವರದಿಯಲ್ಲಿ ಬಿಹಾರ ಅತಿ ಕಡುಬಡವ ರಾಜ್ಯ ಎಂದು ಸ್ಥಾನ ಗಿಟ್ಟಿಸಿದೆ. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.51.91 ಬಡವರಿದ್ದಾರೆ. ನಂತರದ ಸ್ಥಾನದಲ್ಲಿ ಜಾರ್ಖಂಡ್ (ಶೇ.42.16 ಬಡವರು) ಹಾಗೂ ಉತ್ತರ ಪ್ರದೇಶ (ಶೇ.37.39 ಬಡವರು) ರಾಜ್ಯಗಳಿವೆ. 4 ಹಾಗೂ 5ನೇ ಸ್ಥಾನದಲ್ಲಿ ಕ್ರಮವಾಗಿ ಮಧ್ಯಪ್ರದೇಶ (ಶೇ.36.65 ಬಡವರು) ಹಾಗೂ ಮೇಘಾಲಯ (ಶೇ.32.67 ಬಡವರು) ಇವೆ. ಇದೇ ವೇಳೆ, ಕರ್ನಾಟಕ 19ನೇ ಸ್ಥಾನದಲ್ಲಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.13.16ರಷ್ಟುಜನರು ಬಡವರಾಗಿದ್ದಾರೆ.
ಕೇರಳದಲ್ಲಿ ಅತಿ ಕಮ್ಮಿ ಬಡವರು:
ಇದೇ ವೇಳೆ ಕೇರಳವು (Kerala) ಅತಿ ಕಡಿಮೆ ಬಡವರನ್ನು ಹೊಂದಿದ ರಾಜ್ಯವಾಗಿ ಹೊರಹೊಮ್ಮಿದೆ. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.0.71ರಷ್ಟುಜನರು ಮಾತ್ರ ಬಡವರಿದ್ದಾರೆ. ನಂತರದ ಸ್ಥಾನಗಳಲ್ಲಿ ಗೋವಾ (Goa) (ಶೇ.3.76 ಬಡವರು), ಸಿಕ್ಕಿಂ (Sikkim) (ಶೇ.3.82 ಬಡವರು), ತಮಿಳುನಾಡು (Tamil Nadu) (ಶೇ.4.89 ಬಡವರು) ಹಾಗೂ ಪಂಜಾಬ್ (Punjab) (ಶೇ.5.59 ಬಡವರು) ಇದ್ದಾರೆ.
ಸೂಚ್ಯಂಕದ ಮಾನಡಂಡ:
ಜಾಗತಿಕ ಮನ್ನಣೆ ಪಡೆದ ಆಕ್ಸ್‌ಫರ್ಡ್ ಬಡತನ ಹಾಗೂ ಮಾನವ ಅಭಿವೃದ್ಧಿ ಉಪಕ್ರಮ ಹಾಗೂ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯ ಸಮೀಕ್ಷಾ ಮಾನದಂಡಗಳನ್ನು ಆಧರಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗ ಹೇಳಿದೆ. ಆರೋಗ್ಯ, ಶಿಕ್ಷಣ ಹಾಗೂ ಜೀವನ ಗುಣಮಟ್ಟ- ಎಂಬ 3 ಮಾನದಂಡ ಆಧರಿಸಿ ಬಡತನ ಅಳೆಯಲಾಗಿದೆ. ಇವುಗಳಲ್ಲಿ ಪೌಷ್ಟಿಕತೆ, ಶಿಶುಮರಣ, ಶಾಲೆಗೆ ಮಕ್ಕಳ ಹೋಗುವಿಕೆ, ಅಡುಗೆಗೆ ಬಳಸುವ ಇಂಧನ, ನೈರ್ಮಲ್ಯ, ಕುಡಿವ ನೀರು, ಮನೆ, ವಿದ್ಯುತ್, ಬ್ಯಾಂಕ್ ಖಾತೆ- ಇತ್ಯಾದಿಗಳಿವೆ.
ಸ್ಥಾನ - ರಾಜ್ಯ - ಬಡವರು
1 ಬಿಹಾರ ಶೇ.51.91
2 ಜಾರ್ಖಂಡ್ ಶೇ.42.16
3 ಉ.ಪ್ರ. ಶೇ.37.39
19 ಕರ್ನಾಟಕ ಶೇ.13.16
ರಾಜ್ಯದ ಅತಿ ಬಡ ಜಿಲ್ಲೆಗಳ ಪಟ್ಟಿ ಬಿಡುಗಡೆ!
ಕರ್ನಾಟಕದ ಜಿಲ್ಲೆಗಳಲ್ಲಿ ಯಾದಗಿರಿ (Karnataka-Yadgiri) ಅತಿ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆ ಎಂಬ ಹಣೆಪಟ್ಟಿಗೆ ಭಾಜನವಾಗಿದೆ. ನಂತರದ ಸ್ಥಾನಗಳಲ್ಲಿ ರಾಯಚೂರು (Raichur), ಕೊಪ್ಪಳ (Koppal), ಬಳ್ಳಾರಿ (Ballary), ವಿಜಯಪುರ (Vijayapur) ಹಾಗೂ ಕಲಬುರಗಿ (Kalburgi) ಇವೆ. ಈ ಪಟ್ಟಿಗಮನಿಸಿದಾಗ ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ‘ಕಲ್ಯಾಣ ಕರ್ನಾಟಕ’ದ ಜಿಲ್ಲೆಗಳು ಹಾಗೂ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ‘ಕಿತ್ತೂರು ಕರ್ನಾಟಕ’ದ ಬಹುತೇಕ ಜಿಲ್ಲೆಗಳು ತೀರಾ ಹಿಂದುಳಿದಿವೆ ಎಂಬುದು ಸಾಬೀತಾಗಿದೆ.\
Multidimensional Poverty Index: ರಾಜ್ಯದ ಅತಿ ಬಡ ಜಿಲ್ಲೆಗಳ ಪಟ್ಟಿ ಬಿಡುಗಡೆ: ಯಾದಗಿರಿ ಮೊದಲ ಸ್ಥಾನ!
ನಂ.1 ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.41.67ರಷ್ಟುಜನ ಬಡವರಾಗಿದ್ದಾರೆ. ನಂತರದ 9 ಸ್ಥಾನದಲ್ಲಿ ರಾಯಚೂರು (ಶೇ.32.19 ಬಡವರು), ಕೊಪ್ಪಳ (ಶೇ.24.6), ಹೊಸದಾಗಿ ಸ್ಥಾಪನೆಯಾದ ವಿಜಯನಗರ ಸೇರಿದಂತೆ ಬಳ್ಳಾರಿ (ಶೇ.23.4), ವಿಜಯಪುರ (ಶೇ.22.4) ಹಾಗೂ ಕಲಬುರಗಿ (ಶೇ.21.8), ಗದಗ (ಶೇ.20.27), ಬಾಗಲಕೋಟೆ (ಶೇ.20.23), ಬೀದರ್ (ಶೇ.19.42) ಹಾಗೂ ಚಾಮರಾಜನಗರ (ಶೇ.18.91) ಇವೆ.
5 ಕಡು ಬಡ ಜಿಲ್ಲೆಗಳು
1) ಯಾದಗಿರಿ 41.67%, 2) ರಾಯಚೂರು 32.19%, 3) ಕೊಪ್ಪಳ 24.6%, 4) ಬಳ್ಳಾರಿ 23.4%, 5) ವಿಜಯಪುರ 22.4%
5 ಶ್ರೀಮಂತ ಜಿಲ್ಲೆಗಳು
1) ಬೆಂಗಳೂರು 2.31%, 2) ಮಂಡ್ಯ 6.62%, 3) ಹಾಸನ 6.64%, 4) ದಕ್ಷಿಣ ಕನ್ನಡ 6.69% 5) ಮೈಸೂರು 7.79%