ಗಯಾ (ಬಿಹಾರ): ಏಕಾಂಗಿಯಾಗಿ ಗುಡ್ಡ ಕೊರೆದು ತನ್ನ ಊರಿಗೆ ರಸ್ತೆ ನಿರ್ಮಿಸಿದ ಬಿಹಾರದ ದಶರತ್‌ ಮಾಂಝಿಯ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ. ಅದೇ ರೀತಿ ಬಿಹಾರದಲ್ಲಿ ಇನ್ನೊಬ್ಬ ವ್ಯಕ್ತಿ ತನ್ನ ಊರಿನ ಕೆರೆಗೆ ನೀರು ಹರಿಸಲು ಏಕಾಂಗಿಯಾಗಿ 3 ಕಿ.ಮೀ. ಉದ್ದದ ಕಾಲುವೆ ತೋಡಿ ಸುದ್ದಿಯಾಗಿದ್ದಾನೆ.

ಬಿಹಾರದ ಗಯಾ ಜಿಲ್ಲೆಯ ಲಹ್ತುವಾ ಪ್ರದೇಶದ ಕೋಠಿಲಾವಾ ಎಂಬ ಗ್ರಾಮಕ್ಕೆ ಸಮೀಪದ ಗುಡ್ಡವೊಂದರಿಂದ ನೀರು ಹರಿಸಲು ಲೌಂಗಿ ಬುಹಿಯಾನ್‌ ಎಂಬಾತ ಏಕಾಂಗಿಯಾಗಿ 30 ವರ್ಷ ಶ್ರಮಿಸಿ ಕಾಲುವೆ ನಿರ್ಮಿಸಿದ್ದಾನೆ. ಕಾಲುವೆಯ ಮೂಲಕ ಈಗ ನೀರು ಹರಿಯುತ್ತಿದ್ದು, ಲೌಂಗಿ ಬುಹಿಯಾನ್‌ ಸಂತಸಕ್ಕೆ ಪಾರವೇ ಇಲ್ಲ.

ಸುತ್ತಮುತ್ತಲೂ ಅರಣ್ಯದಿಂದ ಕೂಡಿದ್ದರೂ ಕೋಠಿಲಾವಾ ಗ್ರಾಮದಲ್ಲಿ ನೀರಿನ ಕೊರತೆ ಇತ್ತು. ಹೀಗಾಗಿ ಕೃಷಿ ಮತ್ತು ಹೈನುಗಾರಿಕೆಯನ್ನೇ ಅವಲಂಬಿಸಿದ್ದ ಜನ ನೀರಿಲ್ಲದೆ ಗುಳೆ ಹೋಗುವ ದುಸ್ಥಿತಿ ಎದುರಾಗಿತ್ತು.

ಸುತ್ತಲಿನ ಬೆಟ್ಟದ ಮೇಲೆ ಬಿದ್ದ ಮಳೆಯ ನೀರು ಹರಿದು ನದಿಯನ್ನು ಸೇರುತ್ತಿತ್ತು. ಇದನ್ನು ಗ್ರಾಮಕ್ಕೆ ಕಾಲುವೆಯ ಮೂಲಕ ತಿರುಗಿಸಬೇಕು ಎಂಬುದು ಲಾವುಂಗಿ ಉದ್ದೇಶವಾಗಿತ್ತು. ಆದರೆ, ಇದಕ್ಕೆ ಊರಿನವರ ಸಹಕಾರ ಸಿಗಲಿಲ್ಲ. ಛಲ ಬಿಡದ ಲೌಂಗಿ ಏಕಾಂಗಿಯಾಗಿ ಗುದ್ದಲಿ ಹಿಡಿದು ಕಾಲುವೆಯನ್ನು ನಿರ್ಮಿಸಿದ್ದಾನೆ. ಈತನ ಶ್ರಮದ ಫಲವಾಗಿ ಊರಿನ ಹೊಲಗಳಿಗೆ ನೀರು ಹರಿಯಲು ಆರಂಭವಾಗಿದೆ.