ಕಳೆದೊಂದು ತಿಂಗಳಿನಿಂದ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿರುವ ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಚರಣ ಮಂಗಳವಾರ ಮುಕ್ತಾಯ ಕಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.
ಪಟನಾ (ನ.12): ಕಳೆದೊಂದು ತಿಂಗಳಿನಿಂದ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿರುವ ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಚರಣ ಮಂಗಳವಾರ ಮುಕ್ತಾಯ ಕಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಎಲ್ಲ ಸಮೀಕ್ಷೆಗಳು, ‘ಮತ್ತೊಮ್ಮೆ ಎನ್‌ಡಿಎ ಬಿಹಾರದಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಪುನಃ ನಿರಾಶೆಯಾಗಲಿದೆ’ ಎಂದು ಭವಿಷ್ಯ ನುಡಿದಿವೆ. ಮತ ಎಣಿಕೆ ನ.14ರಂದು ನಡೆಯಲಿದ್ದು, ಅಂದು ಈ ಸಮೀಕ್ಷೆಗಳು ನಿಜವಾಗಲಿವೆಯೇ ಎಂದು ಗೊತ್ತಾಗಲಿದೆ.
ಎನ್‌ಡಿಎಗೆ 10ಕ್ಕೆ 10: 10 ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಎಲ್ಲ ಸಮೀಕ್ಷೆಗಳು ಎನ್‌ಡಿಎಗೆ ಜಯ ಎಂದಿವೆ. ಎಲ್ಲ ಹತ್ತೂ ಸಮೀಕ್ಷೆಗಳನ್ನು ಒಟ್ಟುಗೂಡಿ ಪೋಲ್ ಆಫ್ ಪೋಲ್ಸ್ ನಡೆಸಿದಾಗ ಎನ್‌ಡಿಎಗೆ 147, ಆರ್‌ಜೆಡಿ-ಕಾಂಗ್ರೆಸ್-ಎಡರಂಗದ ಮಹಾಮೈತ್ರಿಕೂಟಕ್ಕೆ 90 ಸ್ಥಾನ ಬರಲಿವೆ. ರಾಜಕೀಯ ರಣನೀತಿ ತಂತ್ರಜ್ಞ ಪ್ರಶಾಂತ್ ಕಿಶೋರ್‌ರ ಜನ್ ಸುರಾಜ್ 1-2 ಸ್ಥಾನ ಗಳಿಸಿ ಖಾತೆ ತೆರೆಯಬಹುದು. ಇತರರು 5-6 ಸ್ಥಾನ ಪಡೆಯಬಹುದು ಎಂದು ಅವು ಹೇಳಿವೆ.
ಚಾಣಕ್ಯ ಹಾಗೂ ಪೀಪಲ್ಸ್ ಇನ್‌ಸೈಟ್ ಸಂಸ್ಥೆಗಳ ಸಮೀಕ್ಷೆಗಳಷ್ಟೇ ಮಹಾಮೈತ್ರಿಕೂಟ 100ರ ಗಡಿ ದಾಟಲಿವೆ ಎಂದಿವೆ. ಇನ್ನು ದೈನಿಕ್ ಭಾಸ್ಕರ್ (145-160), ಮ್ಯಾಟ್ರಿಜ್ (147-167), ಪಿ-ಮಾರ್ಕ್ (142-162), ಟಿಐಎಫ್ ರೀಸರ್ಚ್ (145-163) ಎನ್‌ಡಿಎಗೆ 3ನೇ 2ರಷ್ಟು ಬಹುಮತ ನೀಡಿವೆ.
ಬಿಹಾರದಲ್ಲಿ ಈ ಬಾರಿ ಶೇ.67 ಮತದಾನ: ಇತಿಹಾಸದಲ್ಲೇ ಹೆಚ್ಚು
ಬಿಹಾರ ವಿಧಾನಸಭೆ ಚುನಾವಣೆಯ ಎರಡೂ ಹಂತಗಳಲ್ಲಿ ಶೇ.66.91ರಷ್ಟು ಮತದಾನವಾಗಿದೆ. 1951ರಲ್ಲಿ ದೇಶದಲ್ಲಿ ಚುನಾವಣೆ ಆರಂಭವಾದ ಬಳಿಕ ಬಿಹಾರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮತದಾನ ನಡೆದಿದ್ದು ಇದೇ ಮೊದಲು.
