ನವದೆಹಲಿ(ನ.11):  ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಗೆಲುವು ಆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮತ್ತೊಮ್ಮೆ ಗೆದ್ದಿರುವುದರ ದ್ಯೋತಕ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ತಡರಾತ್ರಿ ಟ್ವೀಟ್‌ ಮಾಡಿರುವ ಅವರು, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಎಂಬ ಎನ್‌ಡಿಎ ಮೈತ್ರಿಕೂಟದ ಮಂತ್ರದಲ್ಲಿ ಬಿಹಾರದ ಪ್ರತಿಯೊಂದು ವರ್ಗವೂ ವಿಶ್ವಾಸವಿರಿಸಿದೆ. ಬಿಹಾರದ ಪ್ರತಿ ವ್ಯಕ್ತಿ ಹಾಗೂ ಪ್ರತಿಯೊಂದು ಪ್ರದೇಶದ ಸಮತೋಲಿತ ಅಭಿವೃದ್ಧಿಗಾಗಿ ಸಂಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ತಮ್ಮ ಆಶೋತ್ತರ ಹಾಗೂ ಆದ್ಯತೆ ಅಭಿವೃದ್ಧಿಯೊಂದೇ ಎಂಬುದನ್ನು ಬಿಹಾರದ ಮತದಾರರು ಸ್ಪಷ್ಟಪಡಿಸಿದ್ದಾರೆ. ಎನ್‌ಡಿಎ ಕೂಟದ ಉತ್ತಮ ಆಡಳಿತಕ್ಕೆ ಜನತೆ ಆಶೀರ್ವದಿಸಿರುವುದು ಜನತೆಯ ಕನಸು ಹಾಗೂ ನಿರೀಕ್ಷೆ ಏನೆಂಬುದನ್ನು ತೋರಿಸಿದೆ. ಆಡಳಿತಾರೂಢ ಬಿಜೆಪಿಗೆ ಗ್ರಾಮೀಣ ಭಾಗ, ಬಡವರು, ರೈತರು, ಕಾರ್ಮಿಕರು ಹಾಗೂ ವ್ಯಾಪಾರಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದ ಬೆಂಬಲ ದೊರೆತಿದೆ ಎಂದಿದ್ದಾರೆ.

ಡಬಲ್‌ ಎಂಜಿನ್‌ಗೆ ಸಂದ ಜಯ

ಜಾತೀಯತೆ, ತುಷ್ಟೀಕರಣದ ರಾಜಕಾರಣವನ್ನು ಬಿಹಾರದ ಪ್ರತಿ ವರ್ಗವೂ ತಿರಸ್ಕರಿಸಿದೆ. ಎನ್‌ಡಿಎದ ಅಭಿವೃದ್ಧಿ ರಾಜಕಾರಣವನ್ನು ಒಪ್ಪಿಕೊಂಡಿದೆ. ಪ್ರತಿಯೊಬ್ಬ ಬಿಹಾರಿಯ ನಿರೀಕ್ಷೆ ಹಾಗೂ ಆಶೋತ್ತರದ ಗೆಲುವು ಇದಾಗಿದೆ. ಮೋದಿ, ನಿತೀಶ್‌ ಕುಮಾರ್‌ ಅವರ ಡಬಲ್‌ ಎಂಜಿನ್‌ ಅಭಿವೃದ್ಧಿಗೆ ಸಂದ ವಿಜಯವೂ ಹೌದು.

- ಅಮಿತ್‌ ಶಾ ಕೇಂದ್ರ ಗೃಹ ಸಚಿವ