ಬಿಹಾರ ಸಿಎಂ ಯಾರು? ನಾಳೆ ನಿರ್ಧಾರ| ಸಿಎಂ ಆಯ್ಕೆಗೆ ನಾಳೆ ಎನ್‌ಡಿಎ ಶಾಸಕಾಂಗ ಸಭೆ| ಮುಖ್ಯಮಂತ್ರಿ ಯಾರೆಂಬುದು ಇನ್ನೂ ಸಸ್ಪೆನ್ಸ್‌

ಪಟನಾ(ನ.14): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ಭಾನುವಾರ ನಡೆಯಲಿದ್ದು, ಈ ವೇಳೆ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ.

ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್‌ ಕುಮಾರ್‌ ಅವರನ್ನೇ ಸಿಎಂ ಗದ್ದುಗೆಗೆ ಆರಿಸಲು ಶಾಸಕರು ನಿರ್ಣಯ ಕೈಗೊಳ್ಳುತ್ತಾರಾ ಎಂಬುದು ಶುಕ್ರವಾರ ಸ್ಪಷ್ಟವಾಗಿಲ್ಲ. ಹೀಗಾಗಿ ಸಭೆಯಲ್ಲಿ ಯಾವ ನಿರ್ಧಾರ ಹೊರಹೊಮ್ಮಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಶುಕ್ರವಾರ ನಿತೀಶ್‌ ಕುಮಾರ್‌ ಅವರ ನಿವಾಸದಲ್ಲಿ ಎನ್‌ಡಿಎ ಪಾಲುದಾರರಾದ ಜೆಡಿಯು, ಬಿಜೆಪಿ, ಹಮ್‌ ಹಾಗೂ ವಿಐಪಿ ಮುಖಂಡರ ಸಭೆ ನಡೆಯಿತು. ‘ಭಾನುವಾರ ಮಧ್ಯಾಹ್ನ 12ಕ್ಕೆ ಶಾಸಕಾಂಗ ಸಭೆ ಕರೆಯಲು ನಿರ್ಧರಿಸಲಾಗಿದೆ ಹಾಗೂ ಚರ್ಚೆ ನಡೆಸಿ ಮುಂದಿನ ಎಲ್ಲ ನಿರ್ಣಯಗಳನ್ನು ಆ ವೇಳೆ ತೆಗೆದುಕೊಳ್ಳಲಾಗುವುದು’ ಎಂದು ಸಭೆ ಬಳಿಕ ನಿತೀಶ್‌ ಸುದ್ದಿಗಾರರಿಗೆ ತಿಳಿಸಿದರು.

ಆದರೆ ತಮ್ಮನ್ನೇ ಸಿಎಂ ಆಗಿ ಆಯ್ಕೆ ಮಾಡಲಾಗುತ್ತದೆ ಎಂಬ ಸ್ಪಷ್ಟಮಾತುಗಳನ್ನು ಅವರು ಆಡಲಿಲ್ಲ. ಅಲ್ಲದೆ, ಸಭೆಯಲ್ಲಿ ಏನು ಚರ್ಚೆ ನಡೆಯಿತೆಂದೂ ಹೇಳಲಿಲ್ಲ. ಮೂಲಗಳ ಪ್ರಕಾರ, ಸಂಪುಟದಲ್ಲಿ ಯಾವ ಪಕ್ಷಕ್ಕೆ ಎಷ್ಟುಪ್ರಾತಿನಿಧ್ಯ ಸಿಗಬೇಕು ಹಾಗೂ ಸ್ಪೀಕರ್‌ ಯಾವ ಪಕ್ಷದವರಾಗಬೇಕು ಎಂಬ ಸಮಾಲೋಚನೆ ನಡೆಸಲಾಗಿದೆ.

ಸುಶೀಲ್‌ ಮೋದಿಗೆ ಕೊಕ್‌, ದಲಿತಗೆ ಡಿಸಿಎಂ ಪಟ್ಟ?

ಪಟನಾ: ಬಿಹಾರದಲ್ಲಿ ಹಾಲಿ ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಅವರಿಗೆ ಕೊಕ್‌ ನೀಡಿ ದಲಿತ ಅಥವಾ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರನ್ನು ಡಿಸಿಎಂ ಸ್ಥಾನಕ್ಕೆ ಬಿಜೆಪಿ ಹೆಸರಿಸಬಹುದು ಎಂಬ ಗುಲ್ಲು ಹರಡಿದೆ.

ಅಯೋಧ್ಯೆಯಲ್ಲಿ ಭೂಮಿಪೂಜೆ ನೆರವೇರಿಸಿದ ದಲಿತ ವಿಧಾನಪರಿಷತ್‌ ಸದಸ್ಯ ಕಾಮೇಶ್ವರ ಚೌಪಾಲ್‌ಗೆ ಈ ಹುದ್ದೆ ದೊರಕಬಹುದು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಚೌಪಾಲ್‌ ಹೇಳಿದ್ದಾರೆ.

ಈ ನಡುವೆ, ಉತ್ತರ ಪ್ರದೇಶ ಮಾದರಿಯಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಾಗಲಿದ್ದಾರೆ ಎಂಬ ಸುದ್ದಿಯೂ ಇದೆ. ಮೋದಿ ಅವರನ್ನು ಮುಂದುವರಿಸಿ, ಇನ್ನೊಂದು ಡಿಸಿಎಂ ಪಟ್ಟವನ್ನು ದಲಿತ ಅಥವಾ ಹಿಂದುಳಿದ ವರ್ಗದ ಶಾಸಕರೊಬ್ಬರಿಗೆ ನೀಡಬಹುದು ಎಂದೂ ಹೇಳಲಾಗಿದೆ.