ಭುವನೇಶ್ವರ(ಅ.12): ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಷ್ಟುವೈವಿಧ್ಯವೋ ಅಷ್ಟೇ ಪ್ರತಿಷ್ಠೆಯೂ ಹೌದು. ಆ ದಿನ ಸಾವಿರಾರು ಮಂದಿಯನ್ನು ಆಹ್ವಾನಿಸಿ ಊಟ ಹಾಕುವುದು ಸಂಪ್ರದಾಯ. ಆದರೆ ಒಡಿಶಾದ ಜೋಡಿಯೊಂದು ತಮ್ಮ ಮದುವೆ ದಿನದಂದು 500 ಬೀಡಾಡಿ ಪ್ರಾಣಿಗಳಿಗೆ ಊಟ ಹಾಕಿ ಮಾದರಿಯಾಗಿದ್ದಾರೆ.

ಸಿನಿಮಾ ನಿರ್ಮಾಪಕ ಯುರೇಕಾ ಹಾಗೂ ದಂತವೈದ್ಯೆ ಜೋಹಾನಾ ಎಂಬ ದಂಪತಿಗಳು ಮೂಕ ಜೀವಿಗಳ ಹಸಿವು ತಣಿಸಿ ತಮ್ಮ ವಿವಾಹ ದಿನವನ್ನು ಸ್ಮರಣೀಯವಾಗಿಸಿದ್ದಾರೆ. ಜತೆಗೆ ಪ್ರಾಣಿ ರಕ್ಷಣಾ ಎನ್‌ಜಿಒಗೆ ಒಂದಕ್ಕೆ ಹಣ ದಾನ ಮಾಡುವ ಮೂಲಕವೂ ತಮ್ಮ ಪ್ರಾಣಿ ಪ್ರೇಮ ತೋರ್ಪಡಿಸಿದ್ದಾರೆ. ಸೆ.25 ರಂದು ಈ ಜೋಡಿ ಹಸೆಮಣೆ ಏರಿದ್ದು, ಅಂದು ನಗರದಲ್ಲಿನ ಬೀಡಾಡಿ ಪ್ರಾಣಿಗಳಿಗೆ ಮಾಂಸಾಹಾರದ ಊಟವನ್ನು ಹಾಕಿದ್ದಾರೆ. ಮೂರು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಈ ರೀತಿ ಮದುವೆಯಾಗುವುದಾಗಿ ನಿರ್ಧರಿಸಿದ್ದರು.

ಕೊರೋನಾದಿಂದಾಗಿ ಕೈಯಲ್ಲಿದ್ದ ಪ್ರಾಜೆಕ್ಟ್ ಕಳೆದುಕೊಂಡಿದ್ದ ಯುರೇಕಾ, ತಮ್ಮಿಷ್ಟದಂತೆ ಮದುವೆಯಾಗಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಜೊಹಾನಾ ಕೂಡ ಅದ್ಧೂರಿ ಸೀರೆ ಬದಲು ತನ್ನ ತಾಯಿಯ ಮದುವೆ ಸೀರೆಯನ್ನು ಉಟ್ಟಿದ್ದರು. 2017ರಲ್ಲಿ ಮೃತಪಟ್ಟವರನ ಅಜ್ಜಿ ಹಾಗೂ ವಧುವಿನ ತಾಯಿಯ ಸ್ಮರಣಾರ್ಥ ಈ ಕಾರ್ಯ ಮಾಡಿರುವುದಾಗಿ ದಂಪತಿ ಹೇಳಿದ್ದಾರೆ.