ಹೈದರಾಬಾದ್‌(ಜ.09): ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್‌’ ತುರ್ತು ಬಳಕೆಗೆ ಅನುಮೋದನೆ ದೊರಕಿದ್ದರಿಂದ ಉತ್ತೇಜಿತವಾಗಿರುವ ‘ಭಾರತ್‌ ಬಯೋಟೆಕ್‌’ ಕಂಪನಿ, ಈಗ ‘ಇಂಟ್ರಾನೇಸಲ್‌’ ಕೊರೋನಾ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. ಇದೇ ಫೆಬ್ರವರಿ ಹಾಗೂ ಮಾಚ್‌ರ್‍ನಲ್ಲಿ ಭಾರತದಲ್ಲಿ ಇದರ ಮೊದಲ ಹಂತದ ಪ್ರಯೋಗ ನಡೆಸಲು ಅದು ನಿರ್ಧರಿಸಿದೆ.

ಮೂಗಿನ ಎರಡು ಹೊಳ್ಳೆಗಳಲ್ಲಿ ಒಂದೇ ಸಮಯದಲ್ಲಿ (ಸಿಂಗಲ್‌ ಡೋಸ್‌) 2 ಕೊರೋನಾ ಲಸಿಕೆಯ ಹನಿಗಳನ್ನು ಹಾಕುವುದೇ ಈ ‘ಇಂಟ್ರಾನೇಸಲ್‌ ಕೊರೋನಾ ಲಸಿಕೆ’ಯ ಅರ್ಥ.

ಈ ಲಸಿಕೆಯ ಅಭಿವೃದ್ಧಿಗೆ ವಾಷಿಂಗ್ಟನ್‌ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌ ಜತೆ ಭಾರತ್‌ ಬಯೋಟೆಕ್‌ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ, ಯುರೋಪ್‌ ಹಾಗೂ ಜಪಾನ್‌ ಹೊರತುಪಡಿಸಿದರೆ ಮಿಕ್ಕೆಲ್ಲ ದೇಶಗಳಲ್ಲಿ ಇದರ ವಿತರಣೆಯ ಅಧಿಕಾರವನ್ನು ಕಂಪನಿ ಪಡೆದುಕೊಂಡಿದೆ.

‘ಈಗಿನ ಕೋವ್ಯಾಕ್ಸಿನ್‌ ಕೊರೋನಾ ಲಸಿಕೆ 2 ಡೋಸ್‌ನದ್ದಾಗಿದೆ. ಇದು ಇಂಜೆಕ್ಷನ್‌. ಇದಕ್ಕಾಗಿ ಸಿರಿಂಜು, ಸೂಜಿ ಇತ್ಯಾದಿಗಳು ಬೇಕು. ಇದರಿಂದ ವೆಚ್ಚ ಕೂಡ ಅಧಿಕವಾಗುತ್ತದೆ ಹಾಗೂ ಭಾರತದಂಥ ದೇಶಕ್ಕೆ 260 ಕೋಟಿ ಸಿರಿಂಜುಗಳು ಬೇಕು. ಇದು ಮಾಲಿನ್ಯಕ್ಕೂ ಕಾರಣವಾಗುತ್ತದೆ. ಇದರ ಬದಲು ಮೂಗಿನ ಹೊಳ್ಳೆಗಳಲ್ಲಿ 2 ಹನಿ ಇಂಟ್ರಾ ನೇಸಲ್‌ ಲಸಿಕೆ ಹಾಕಿದರೆ ಹಾಕಿದರೆ ಈ ವೆಚ್ಚ ತಪ್ಪುತ್ತದೆ. ಲಸಿಕೆ ನೀಡಿಕೆ ಸುಲಭ ಕೂಡ ಎಂದು ಭಾರತ್‌ ಬಯೋಟೆಕ್‌ ಮುಖ್ಯಸ್ಥ ಡಾ| ಕೃಷ್ಣ ಎಲ್ಲಾ ಹೇಳಿದ್ದಾರೆ.