ನವದೆಹಲಿ(ಮೇ.13): 2ರಿಂದ 18ರ ವಯೋಮಾನದ ಮಕ್ಕಳ ಮೇಲೂ ಕೋವ್ಯಾಕ್ಸಿನ್‌ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸುವ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆಯ ಪ್ರಸ್ತಾವಕ್ಕೆ ‘ವಿಷಯ ತಜ್ಞರ ಸಮಿತಿ’ ಅನುಮೋದನೆ ನೀಡಿದೆ. ಹೀಗಾಗಿ ದೇಶದಲ್ಲಿ ಮೂರನೇ ಅಲೆಗೆ ಮುನ್ನ, ಮಕ್ಕಳಿಗೂ ಕೋವಿಡ್‌ ಲಸಿಕೆ ಲಭ್ಯವಾಗುವ ನಿರೀಕ್ಷೆ ವ್ಯಕ್ತವಾಗಿದೆ.

"

ಈ ಕ್ಲಿನಿಕಲ್‌ ಪ್ರಯೋಗವನ್ನು ದೆಹಲಿಯ ಏಮ್ಸ್‌, ಪಟನಾ ಏಮ್ಸ್‌ ಮತ್ತು ನಾಗಪುರದಲ್ಲಿನ ಮೆಡಿಟ್ರಿನಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಆಸ್ಪತ್ರೆಗಳಲ್ಲಿ 2-18ರ ವಯೋಮಾನದ 525 ಮಕ್ಕಳ ಮೇಲೆ ನಡೆಸಲಾಗುವುದು.

ಭಾರತ್‌ ಬಯೋಟೆಕ್‌ ಸಂಸ್ಥೆ ತನ್ನ ಕೋವ್ಯಾಕ್ಸಿನ್‌ ಲಸಿಕೆ ಅಭಿವೃದ್ಧಿ ವೇಳೆ, 12ರಿಂದ 65 ವರ್ಷ ವಯಸ್ಸಿನ 380 ಅಭ್ಯರ್ಥಿಗಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಿತ್ತು. ಈ ವೇಳೆ ಲಸಿಕೆ ಅತ್ಯಂತ ಸುರಕ್ಷಿತ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವುದು ಕಂಡುಬಂದಿತ್ತು.

"

ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಮಕ್ಕಳ ಮೇಲೇ ಕ್ಲಿನಿಕಲ್‌ ಪ್ರಯೋಗಕ್ಕೆ ಅನುಮತಿ ಕೋರಿ ಇತ್ತೀಚೆಗೆ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣಾ ಸಂಸ್ಥೆಗೆ ಅರ್ಜಿ ಸಲ್ಲಿಸಿತ್ತು. ಇದೀಗ ಅರ್ಜಿಯನ್ನು ಪರಿಶೀಲಿಸಿರುವ ವಿಷಯ ತಜ್ಞರ ಸಮಿತಿ 2/3ನೇ ಹಂತದ ಪ್ರಯೋಗ ನಡೆಸಲು ಅನುಮತಿ ನೀಡಿದೆ. ಆದರೆ 2ನೇ ಹಂತದ ಪರೀಕ್ಷೆಯ ಮಧ್ಯಂತರ ವರದಿಯನ್ನು ತನಗೆ ಸಲ್ಲಿಸಿದ ಬಳಿಕವೇ ಮೂರನೇ ಹಂತಕ್ಕೆ ಮುಂದಾಗಬೇಕು ಎಂದು ಸೂಚಿಸಿದೆ.

ದೇಶದಲ್ಲಿ ಮೂರನೇ ಅಲೆ ವೇಳೆ ಮಕ್ಕಳ ಮೇಲೆ ಸೋಂಕು ಹೆಚ್ಚಿನ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ, ಮಕ್ಕಳಿಗೂ ಲಸಿಕೆ ನೀಡುವ ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಕ್ಕಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಕೂಡಾ ಮಕ್ಕಳಿಗೂ ಲಸಿಕೆ ನೀಡಿ ಅವರನ್ನು ಮೂರನೇ ಅಲೆಯಿಂದ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona