ನವದೆಹಲಿ(ಮೇ.11): ಕೊರೋನಾ ಲಸಿಕೆಗೆ ಬೇಡಿಕೆ ವಿಪರೀತವಾಗಿರುವಾಗಲೇ, ದೆಹಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಿಗೆ ಕೋವ್ಯಾಕ್ಸಿನ್‌ ಲಸಿಕೆಯ ನೇರ ಪೂರೈಕೆಯನ್ನು ಮೇ 1ರಿಂದ ಪ್ರಾರಂಭಿಸಿರುವುದಾಗಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ ತಿಳಿಸಿದೆ. ವಿಶೇಷ ಎಂದರೆ, ಕರ್ನಾಟಕದಲ್ಲಿ ಲಸಿಕೆಗೆ ಕೊರತೆ ಇದ್ದರೂ, 14 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲ. ಹೀಗಾಗಿ ಇನ್ನೂ ಹಲವು ದಿನಗಳ ಕಾಲ ಕರ್ನಾಟಕದಲ್ಲಿ ಲಸಿಕೆ ಕೊರತೆ ಮುಂದುವರಿಯುವ ಸಾಧ್ಯತೆ ಅಧಿಕವಾಗಿದೆ.

ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟವರಿಗೆ ಈಗಲೂ ಲಸಿಕೆ ಕಂಪನಿಗಳಿಂದ ನೇರವಾಗಿ ಖರೀದಿಸಿ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದೆ. ಇದು ಅದೇ ಕೋಟಾದಡಿ ಮಾಡಿದ ಹಂಚಿಕೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ನೀಡಿದ್ದ ಹಂಚಿಕೆ ಪಟ್ಟಿಯನುಸಾರ ಮೇ 1ರಿಂದಲೇ 14 ರಾಜ್ಯಗಳಿಗೆ ಲಸಿಕೆಯ ನೇರ ಪೂರೈಕೆ ಆರಂಭಿಸಲಾಗಿದೆ. ಇನ್ನಿತರೆ ರಾಜ್ಯಗಳಿಂದಲೂ ಲಸಿಕೆಗೆ ಬೇಡಿಕೆ ಸ್ವೀಕರಿಸಲಾಗಿದೆ. ಲಸಿಕೆಯ ಲಭ್ಯತೆಯನ್ನು ನೋಡಿಕೊಂಡು ಅದನ್ನು ಪೂರೈಸಲಾಗುತ್ತದೆ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ತಿಳಿಸಿದ್ದಾರೆ.

"

ಯಾವ ರಾಜ್ಯಕ್ಕೆ ಲಸಿಕೆ?

ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗುಜರಾತ್‌, ಜಮ್ಮು-ಕಾಶ್ಮೀರ, ಜಾರ್ಖಂಡ್‌, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಿಗೆ ಮೇ 1ರಿಂದ ಲಸಿಕೆ ಪೂರೈಸುತ್ತಿದ್ದೇವೆ ಎಂದು ಭಾರತ್‌ ಬಯೋಟೆಕ್‌ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona