* ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ* ಬಂದ್‌ಗೆ ಕಾಂಗ್ರೆಸ್, ಬಿಎಸ್‌ಪಿ, ಆರ್‌ಜೆಡಿ, ಡಿಎಂಕೆ, ವೈಎಸ್ಸಾರ್ ಬೆಂಬಲ* ಉತ್ತರ ರಾಜ್ಯಗಳು, ವಿಪಕ್ಷ ಆಡಳಿತದ ರಾಜ್ಯಗಳಲ್ಲಿ ಯಶ ಸಾಧ್ಯತೆ
ನವದೆಹಲಿ(ಸೆ.27): ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು(Farm Law) ವಿರೋಧಿಸಿ ರೈತರು ಕಳೆದ 10 ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ. ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ 40 ರೈತ ಸಂಘಟನೆಗಳ(Farmers Union) ಮಾತೃ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ(Kisan Morcha), ಸೋಮವಾರ ಭಾರತ್ ಬಂದ್‌ಗೆ(Bharat bandh) ಕರೆ ನೀಡಿದೆ.
ಮುಂಜಾನೆ 6 ರಿಂದ ಸಾಯಂಕಾಲ 6ರವರೆಗೆ ನಡೆಯುವ ಬಂದ್ ನಡೆಯಲಿದೆ. ಭಾರತ್ ಬಂದ್‌ಗೆ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವು ವಿಪಕ್ಷಗಳು ಹಾಗೂ ವಿಪಕ್ಷ ಆಡಳಿತದ ರಾಜ್ಯಗಳು ಬೆಂಬಲ ಸೂಚಿಸಿವೆ. ಹೀಗಾಗಿ ರೈತ ಹೋರಾಟದ ತಾಣವಾಗಿರುವ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ವಿಪಕ್ಷ ಆಡಳಿತದ ರಾಜ್ಯಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು ಹಾಗೂ ಸಾರಿಗೆ ವ್ಯವಸ್ಥೆ ಏರುಪೇರಾಗುವ ಸಂಭವವಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯಿದೆಗಳು ರೈತರಿಗೆ ಮಾರಕವಾಗಿವೆ. ಖಾಸಗಿ ಉದ್ಯಮಿಗಳ ಏಕಸ್ವಾಮ್ಯ ಆಗಲಿದ್ದು, ಸರ್ಕಾರದ ಎಪಿಎಂಸಿ(APMC) ವ್ಯವಸ್ಥೆ ಬಲ ಕಳೆದುಕೊಳ್ಳಲಿದೆ ಎಂದು ಹಲವಾರು ರೈತ ಸಂಘಟನೆಗಳು 300ಕ್ಕೂ ಹೆಚ್ಚು ದಿನದಿಂದ ದೆಹಲಿ ಹೊರವಲಯದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಈ ಕಾಯಿದೆಗಳು ರೈತರ ಬದುಕನ್ನು ಬೀದಿಗೆ ತರುತ್ತವೆ. ಈ ಕಾಯಿದೆಗಳನ್ನು ಹಿಂಪಡೆಯಬೇಕು ಎಂಬುದು ಸಂಘಟನೆಗಳ ಆಗ್ರಹ.
ವಿಪಕ್ಷ, ಕೆಲವು ಸರ್ಕಾರಗಳ ಬೆಂಬಲ:
ಸೋಮವಾರದ ಬಂದ್‌ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಡಿಸಿದ್ದು, ತನ್ನಲ್ಲೇ ಕಾರ್ಯಕರ್ತರಿಗೆ, ರಾಜ್ಯ ಹಾಗೂ ಸಮಿತಿಗಳ ಪದಾಧಿಕಾರಿಗಳಿಗೆ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ.
ಅಲ್ಲದೆ, ಆಮ್ ಆದ್ಮಿ ಪಕ್ಷ, ವೈಎಸ್‌ಆರ್‌ಸಿ, ಡಿಎಂಕೆ, ತೆಲುಗು ದೇಶಂ ಪಕ್ಷ, ಬಿಎಸ್‌ಪಿ, ಆರ್‌ಜೆಡಿ ಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಬಂದ್‌ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿವೆ. ಆಂಧ್ರ ಸರ್ಕಾರ ಸೆ.26ರ ಮಧ್ಯರಾತ್ರಿಯಿಂದ ಸೆ.27ರ ಮಧ್ಯಾಹ್ನದವರೆಗೆ ಸರ್ಕಾರಿ ಸಾರಿಗೆ ವಾಹನಗಳನ್ನು ನಿಲ್ಲಿಸುವುದಾಗಿ ಭರವಸೆ ನೀಡಿದೆ.
ಈ ನಡುವೆ, ಪ್ರತಿಭಟನಾಕಾರಿಗೆ ದೆಹಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸ್ ಹೇಳಿದೆ.
