ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. 

ಬೆಂಗಳೂರು (ಜು.04) ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ವಿಧಾನಸೌಧದಲ್ಲಿ ದಾವಣಗೆರೆ ಜಿಲ್ಲಾ ರೈತರ ಒಕ್ಕೂಟದ ಸದಸ್ಯರೊಂದಿಗೆ ರೇಣುಕಾಚಾರ್ಯ, ಡಿಕೆ ಶಿವಕುಮಾರ್ ಬೇಟಿಯಾಗಿದ್ದಾರೆ. ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಕುರಿತು ಭಾರಿ ಪ್ರತಿಭಟನೆ ನಡೆಸಿದ ರೇಣುಕಾಚಾರ್ಯ ಇದೀಗ ಮಹತ್ವದ ಮನವಿ ಮೂಲಕ ಡಿಕೆ ಶಿವಕುಮಾರ್ ಬೇಟಿಯಾಗಿದ್ದಾರೆ.

ಸೀಳಿರುವ ನಾಲೆ ಮುಚ್ಚಲು ಆಗ್ರಹ

ಭದ್ರಾ ಜಲಾಶಯದ ನಾಲೆ ಕುರಿತು ಶಿವಕುಮಾರ್ ಭೇಟಿಯಾಗ ರೇಣುಕಾಚಾರ್ಯ, ಭದ್ರಾ ಜಲಾಶಯದಿಂದ ಜಾಕ್ ವೆಲ್ ಮೂಲಕ ನೀರು ಹರಿಸಲು ಒತ್ತಾಯಿಸಿದ್ದಾರೆ. ಸೀಳಿರುವ ನಾಲೆಯನ್ನು ಸಿಮೆಂಟ್ ಕಾಂಕ್ರಿಟ್ ಹಾಕಿ ತಡೆಗೋಡೆ ನಿರ್ಮಿಸಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಇದೇ ವೇಳೆ ಭದ್ರಾ ಜಲಾಶಯದ ಬಫರ್ ಜೋನ್ ನಲ್ಲಿ ಯಾವುದೇ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ. ರೈತರ ನಿಯೋಗದೊಂದಿಗೆ ಡಿಕೆ ಶಿವಕುಮಾರ್‌ಗೆ ರೇಣುಕಾಚಾರ್ಯ ಮನವಿ ಸಲ್ಲಿಸಿದ್ದಾರೆ.

ಭದ್ರಾ ಬಲದಂಡೆ ನಾಲೆ ಸೀಳುತ್ತಿರುವುದಕ್ಕೆ ಭಾರಿ ಪ್ರತಿಭಟನೆ

ಭದ್ರಾ ಬಲದಂಡೆ ನಾಲೆ ಸೀಳುತ್ತಿರುವುದಕ್ಕೆ ದಾವಣೆಗೆರೆಯಲ್ಲಿ ರೈತ ಮುಖಂಡರ, ಸಂಘಟನೆಗಳ ಜೊತೆ ಎಂಪಿ ರೇಣುಕಾಚಾರ್ಯ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಕುಡಿಯುವ ನೀರು ಯೋಜನೆಗೆ ನಮ್ಮದು ಯಾವುದೇ ವಿರೋಧ ಇಲ್ಲ. ಆದರೆ ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಮಾಡುವುದಕ್ಕೆ ವಿರೋಧವಿದೆ ಎಂದು ಪ್ರತಿಭಟನೆ ವೇಳೆ ರೇಣುಕಾಚಾರ್ಯ ಹೇಳಿದ್ದರು. ಹಗಲು ರಾತ್ರಿ ಕಾಮಗಾರಿ ನಡೀತಿದೆ, ತಕ್ಷಣ ಕಾಮಗಾರಿ ನಿಲ್ಲಿಸಲು ಈ ವೇಳೆ ಆಗ್ರಹಿಸಿದ್ದರು.

ಅನಗತ್ಯ ಗೊಂದಲ ಬೇಡ, ಕ್ರಮ ಅಗತ್ಯ

ಕಾಂಗ್ರೆಸ್ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಹೊಸದುರ್ಗ ಬಳಿ 30ಕಿಮೀ ಅಂತರದಲ್ಲಿ ವಾಣಿವಿಲಾಸ ಸಾಗರ ಡ್ಯಾಂ ಇದೆ. ಆದರೆ ಸರ್ಕಾರ 90 ಕಿಲೋಮೀಟರ್ ದೂರದಲ್ಲಿರುವ ಭದ್ರಾ ಬಲದಂಡೆ ನಾಲೆ ಸೀಳುತ್ತಿದೆ. ಹಿನ್ನೀರಿನಿಂದ ಅಥವಾ ಜಾಕ್‌ವೆಲ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಿ ಎಂದು ರೇಣುಕಾಚಾರ್ಯ ಆಗ್ರಹಿಸಿದ್ದರು.