ನವದೆಹಲಿ[ನ.26]: ‘ಬೆಳೆತ್ಯಾಜ್ಯ ಸುಡುವಿಕೆ ನಿಲ್ಲಿಸುವಂತೆ ನಾವು ನೀಡಿದ ಆದೇಶವನ್ನು ನೀವು ಪಾಲನೆ ಮಾಡುತ್ತಿಲ್ಲ. ಜನರನ್ನು ನೀವು ಗ್ಯಾಸ್‌ ಚೇಂಬರ್‌ನಲ್ಲಿ ಇರಲು ಏಕೆ ಬಿಡುತ್ತಿದ್ದೀರಿ? ಇದರ ಬದಲು 15 ಚೀಲಗಳಲ್ಲಿ ಸ್ಫೋಟಕ ತುಂಬಿಕೊಂಡು ಬಂದು ಒಂದೇ ಏಟಿಗೆ ದಿಲ್ಲಿ ಜನರನ್ನು ಸಾಯಿಸಿಬಿಡಿ’ ಎಂದು ಪಂಜಾಬ್‌ ಹಾಗೂ ಹರ್ಯಾಣ ಸರ್ಕಾರಗಳ ಮೇಲೆ ಸುಪ್ರೀಂ ಕೋರ್ಟ್‌ ಕಿಡಿಕಾರಿದೆ.

ದಿಲ್ಲಿಯಲ್ಲಿ ಸಹಿಸಲಾಗದ ವಾಯುಮಾಲಿನ್ಯ ಉಂಟಾದ ಕುರಿತ ವಿಚಾರಣೆಯನ್ನು ಸೋಮವಾರವೂ ಮುಂದುವರಿಸಿದ ನ್ಯಾ| ಅರುಣ್‌ ಮಿಶ್ರಾ ಹಾಗೂ ನ್ಯಾ| ದೀಪಕ್‌ ಗುಪ್ತಾ ಅವರ ಪೀಠ, ‘ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯ ಇಂದು ‘ನರಕ’ವಾಗಿಬಿಟ್ಟಿದೆ. ಉಸಿರುಗಟ್ಟುವ ವಾತಾವರಣವಿದ್ದು, ಜನರ ಆಯುಷ್ಯ ಇಳಿಕೆಯಾಗಿದೆ. ಜನರನ್ನು ನೋಡಿಕೊಳ್ಳುವುದು ಎಂದರೆ ಇದೇನಾ? ಮಾಲಿನ್ಯದಿಂದಾಗಿ ಸಾಯಲು ಅವಕಾಶ ನೀಡುತ್ತೀರಾ? ಜನರ ಆಯುಷ್ಯ ಕಮ್ಮಿ ಮಾಡಲು ನಾವು ಸರ್ಕಾರಗಳಿಗೆ ಬಿಡಲ್ಲ’ ಎಂದು ಎಚ್ಚರಿಸಿತು.

ಗೌತಮ್ ಗಂಭೀರ್ ನಾಪತ್ತೆ!: ಗಲ್ಲಿ ಗಲ್ಲಿಯಲ್ಲೂ ಪೋಸ್ಟರ್‌ಗಳ ಭರಾಟೆ!

‘ಪಂಜಾಬ್‌ ಹಾಗೂ ಹರ್ಯಾಣಗಳಲ್ಲಿ ರೈತರು ಬೆಳೆ ಸುಡುವಿಕೆ ಮಾಡುತ್ತಿರುವುದರಿಂದ ಮಾಲಿನ್ಯ ಉಂಟಾಗುತ್ತಿದೆ. ಬೆಳೆ ಸುಡುವಿಕೆ ನಿಲ್ಲಿಸಬೇಕು ಎಂದು ನಾವು ಇತ್ತೀಚೆಗೆ ಆದೇಶಿಸಿದ್ದೆವು. ಆದರೆ ನೀವು ನಮ್ಮ ಆದೇಶ ಪಾಲಿಸದೇ ಸುಮ್ಮನಿದ್ದೀರಿ. ಹಾಗಾಗಿ ನಿಮ್ಮ ಮೇಲೆ ಹಾಗೂ ಎಲ್ಲ ಸಂಬಂಧಿಸಿದ ಅಧಿಕಾರಿಗಳ ಮೇಲೆ ದಂಡ ವಿಧಿಸಬೇಕಾಗುತ್ತದೆ. ಆ ದಂಡದ ಹಣವನ್ನು ಜನರಿಗೆ ಪರಿಹಾರ ರೂಪದಲ್ಲಿ ಹಂಚಲಾಗುತ್ತದೆ. ಹೊಗೆ ಕೊಠಡಿಯಲ್ಲಿ ಜನರನ್ನು ಕೂಡಿಸುವುದಕ್ಕಿಂತ ಒಮ್ಮೆಲೇ 15 ಕೇಜಿ ಸ್ಫೋಟಕ ತಂದು ಸ್ಫೋಟಿಸಿ ಸಾಯಿಸಿಬಿಡಿ’ ಎಂದು ಪಂಜಾಬ್‌ ಹಾಗೂ ಹರ್ಯಾಣ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೋರ್ಟ್‌ ತಪರಾಕಿ ಹಾಕಿತು.

ಇನ್ನು 10 ದಿನದೊಳಗೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಂಡ ವರದಿ ಹಾಗೂ ದಿಲ್ಲಿಯಲ್ಲಿ ಹೊಗೆ ನಿಯಂತ್ರಣಕ್ಕೆ ಗೋಪುರ ಸ್ಥಾಪನೆ ಬಗ್ಗೆ ವರದಿಗಳನ್ನು ಸಲ್ಲಿಸಿ ಎಂದು ಪಂಜಾಬ್‌, ಹರ್ಯಾಣ ಹಾಗೂ ದಿಲ್ಲಿ ಸರ್ಕಾರಗಳಿಗೆ ನ್ಯಾಯಪೀಠ ಸೂಚಿಸಿತು.

ವಾಯುಮಾಲಿನ್ಯ: ರಾಷ್ಟ್ರ ರಾಜಧಾನಿ ದೆಹಲಿ ವಿಶ್ವಕ್ಕೆ ನಂ. 1!