ಬೆಂಗಳೂರಲ್ಲಿ ಪಾಕಿಸ್ತಾನಿಗಳ ಬಂಧನ; 22 ಜನರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟ ಪರ್ವೇಜ್ ಬಂಧನ!
ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಫರ್ವೇಜ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಪಾಕಿಸ್ತಾನಿ ಪ್ರಜೆಗಳಿಗೆ ನಕಲಿ ಭಾರತೀಯ ದಾಖಲೆಗಳನ್ನು ಸೃಷ್ಟಿಸಿದ್ದಾನೆ ಎಂದು ಆರೋಪಿಸಲಾಗಿದೆ. ಫರ್ವೇಜ್ ಮೆಹದಿ ಫೌಂಡೇಶನ್ ನೆರವಿನಿಂದ ಪಾಕಿಸ್ತಾನಿ ಪ್ರಜೆಗಳನ್ನು ಭಾರತಕ್ಕೆ ಕರೆತಂದಿದ್ದ ಎನ್ನಲಾಗಿದೆ.
ಬೆಂಗಳೂರು (ಅ.07): ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನಿ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಮೆಹದಿ ಫೌಂಡೇಶನ್ ನೆರವಿನಿಂದ ಪಾಕಿಸ್ತಾನದಿಂದ ಬಂದಿದ್ದ 22 ಜನರನ್ನು ಅನಧಿಕೃತವಾಗಿ ಭಾರತದ ವಿವಿಧ ದೇಶಗಳಿಗೆ ರವಾನಿಸಿ, ಆಧಾರ್ ಕಾರ್ಡ್ ಹಾಗೂ ವೀಸಾ ಪಾಸ್‌ಪೋರ್ಟ್ ಮಾಡಿಸಿಕೊಟ್ಟಿದ್ದ ಫರ್ವೇಜ್‌ನನ್ನು ಬೆಂಗಳೂರು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಜಿಗಣಿಯಲ್ಲಿ ಪಾಕಿಸ್ತಾನಿ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರಿಂದ ಪರ್ವೇಜ್ ಬಂಧಿಸಲಾಗಿದೆ. ಪಾಕಿಸ್ತಾನದ ಪ್ರಜೆಗಳಿಗೆ ನಕಲಿ ಭಾರತೀಯ ದಾಖಲೆಗಳನ್ನು ಮಾಡಿಸಿದ್ದ ಈ ಆರೋಪಿ. ಈ ದಾಖಲೆಗಳ ಅನುಸಾರ ಪಾಕಿಸ್ತಾನದ ಪ್ರಜೆಗಳು ಜಿಗಣಿ ಹಾಗೂ ಪೀಣ್ಯದಲ್ಲಿ ವಾಸವಾಗಿದ್ದು, ಇದೀಗ ಬಂಧನವಾಗಿದ್ದಾರೆ. ಈ ಪ್ರಜೆಗಳ ಸಂಪರ್ಕದಲ್ಲಿ ಇದ್ದ ಆರೋಪಿ ಪರ್ವೆಜ್ ಹಿನ್ನೆಲೆಯೂ ಭಯಂಕರವಾಗಿದೆ. ಪರ್ವೇಜ್‌ಗೆ ಈಗಾಗಲೇ ಮದುವೆಯಾಗಿ ಮೊದಲ ಹೆಂಡತಿಗೆ 6 ಮಕ್ಕಳಿದ್ದರೂ ಪಾಕಿಸ್ತಾನಿ ಮಹಿಳೆ ಮದುವೆಯಾಗಿ ಭಾರತೀಯ ದಾಖಲೆಯನ್ನು ಮಾಡಿಸಿಕೊಟ್ಟಿದ್ದನು.
ಇದನ್ನೂ ಓದಿ: ದಾವಣಗೆರೆ ವ್ಯಕ್ತಿ ಜೊತೆ ಪಾಕ್ ಮಹಿಳೆ ವಿವಾಹ ತನಿಖೆಯಲ್ಲಿ ಬೆಳಕಿಗೆ! ಬೆಂಗಳೂರಿಗೆ ನುಸುಳಿದ್ದಾರಾ ಪಾಕಿಸ್ತಾನಿಗಳು?
ಆರೋಪಿ ಪರ್ವೇಜ್ ಉತ್ತರ ಪ್ರದೇಶ ಮೂಲದವನಾದರೂ ಮುಂಬೈನಲ್ಲಿ ವಾಸವಾಗಿದ್ದನು. ತನ್ನ 17ನೇ ವಯಸ್ಸಿಗೆ ಮುಂಬೈಗೆ ಬಂದಿದ್ದ ಈತ, ಉತ್ತರ ಪ್ರದೇಶ ಮೂಲದ ಮಹಿಳೆಯನ್ನು ಮದುವೆಯಾಗಿ, ಆಕೆಗೆ 6 ಮಕ್ಕಳನ್ನೂ ಕರುಣಿಸಿದ್ದಾನೆ. ಇದಾದ ಬಳಿಕ ಈತ ಮೆಹದಿ ಫೌಂಡೇಶನ್ ಸಂಪರ್ಕ ಬೆಳೆಸಿಕೊಂಡಿದ್ದಾನೆ. ಮೆಹದಿ ಫೌಂಡೇಶನ್‌ನ ಗುರು ಯುನಸ್ ಅಲ್ಗೋರ್ ಪರಿಚಯ ಮಾಡಿಕೊಂಡು ಧರ್ಮ ಪ್ರಚಾರಕ್ಕೆ ಇಳಿದಿದ್ದನು. ಧರ್ಮ ಪ್ರಚಾರದ ಸಂದರ್ಭದಲ್ಲಿ ಒಟ್ಟು 22 ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬಂದಿದ್ದರು. ಅದರಲ್ಲಿ ಒಬ್ಬ ಮಹಿಳೆಯನ್ನು ಈತ 2ನೇ ಮದುವೆ ಮಾಡಿಕೊಂಡಿದ್ದನು. ವೀಸಾ ಮೂಲಕ ಪಾಕಿಸ್ತಾನದಿಂದ ಬಂದಿದ್ದ ಈ ಮಹಿಳೆಯ ಹೆಸರು ಕ್ಯೂಮರ್.
MFI ಸಂಘಟನೆಯ ಮೂಲಕ ಧರ್ಮ ಪ್ರಚಾರ ಮಾಡಿಕೊಂಡಿದ್ದ ಫರ್ವೇಜ್ ಎಲ್ಲ 22 ಪಾಕಿಸ್ತಾನಿ ಪ್ರಜೆಗಳನ್ನು ದೇಶದ ಬೇರೆ ಬೇರೆ ಕಡೆಗೆ ಕಳುಹಿಸಿಕೊಟ್ಟಿದ್ದನು. ಈತನೇ ಇವೆಲ್ಲರಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಕೊಟ್ಟಿದ್ದನು. ಇವರಿಗೆ ಭಾರತದವರೇ ಎಂಬಂತೆ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೇರಿದಂತೆ ಪ್ರತಿಯೊಂದು ದಾಖಲೆ ಮಾಡಿಸಿಕೊಟ್ಟಿದ್ದನು. ಆದರೆ, ಚೆನ್ನೈನಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಪಾಕಿಸ್ತಾನಿ ಪ್ರಜೆಗಳು ಪೊಲೀಸರಿಂದ ಅರೆಸ್ಟ್ ಆಗಿದ್ದರು. ಇದಾದ ಬಳಿಕ ಜಿಗಣಿಯಲ್ಲಿ ರಶೀದ್ ಅಲಿ ಸಿದ್ದಕಿ ಕುಟುಂಬ ಬಂಧನ ಆಗಿತ್ತು. ಆದರೆ, ಇವರು ಪರ್ವೇಜ್ ಹೆಸರನ್ನು ಬಾಯಿಬಿಟ್ಟಿದ್ದಾರೆ. ಬಳಿಕ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದರು.
ಪಾಕ್ ನುಸುಳುಕೋರರಿಗೆ ಕಡಿವಾಣ ಹಾಕಿದ್ದೇ ಬಿಜೆಪಿ ಸರ್ಕಾರ; ಗೃಹ ಸಚಿವ ಪರಮೇಶ್ವರ್‌ಗೆ ಕೇಂದ್ರ ಸಚಿವ ಜೋಶಿ ತಿರುಗೇಟು
ಜೈಲಿನಿಂದ ಬಿಡಿಸಲು ಹಣ ಪಡೆದು ಬರುತ್ತಿದ್ದ ಪರ್ವೇಜ್: ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳು ಬಂಧನ ಆಗುತ್ತಿದ್ದಂತೆ ಅವರನ್ನು ಬಂಧನದಿಂದ ಬಿಡಿಸಲು ಅಗತ್ಯವಾಗಿರುವ ಯೋಜನೆ ರೂಪಿಸಿ, ಹಣ ತರಲು ಮುಂಬೈಗೆ ಹೋಗಿದ್ದನು. ಇನ್ನು ಪೊಲೀಸರು ಕೂಡ ಆರೋಪಿ ಬಂಧನಕ್ಕೆ ಮುಂಬೈಗೆ ತೆರಳಿದ್ದರು. ಆದರೆ, ಅದಾಗಲೇ ಆರೋಪಿ ಪರ್ವೇಜ್ ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದನು. ಈತ ಯಾರಿಗೂ ತನ್ನ ಸುಳಿವು ಗೊತ್ತಾಗಬಾರದು ಎಂದು ರೈಲಿನಲ್ಲಿ ಪ್ರಯಾಣ ಮಾಡಿದ್ದನು. ಈ ಮಾಹಿತಿಯನ್ನು ಕಲೆ ಹಾಕಿದ್ದ ಪೊಲೀಸರು, ಈತ ಬೆಂಗಳೂರಿನಲ್ಲಿ ರೈಲು ಇಳಿಯುತ್ತಿದ್ದಂತೆ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಜೆ ಹಾಜರುಪಡಿಸಿ, 10 ದಿನ ಕಸ್ಟಡಿಗೆ ಪಡೆದಿದ್ದಾರೆ.