ಕೆಂಪೇಗೌಡರ ಪ್ರತಿಮೆ ಕಲಾಕೃತಿ ನಿರ್ಮಾಣದ ಹಿಂದಿರುವುದು ಪದ್ಮವಿಭೂಷಣ ರಾಮ ಸುತಾರ್‌ ಆರ್ಟ್ಸ್‌ ಆ್ಯಂಡ್‌ ಕ್ರಿಯೇಷನ್ಸ್‌ ಸಂಸ್ಥೆ. ಪ್ರತಿಮೆಯ ವಿನ್ಯಾಸದ ಹಿಂದೆ ನಿಂತವರು ರಾಮಸುತಾರ್‌ ಅವರ ಪುತ್ರ ಅನಿಲ್‌ ಸುತಾರ್‌.

ಸಂದರ್ಶನ: ಡೆಲ್ಲಿ ಮಂಜು

ನವದೆಹಲಿ (ನ.11): ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ 90 ಅಡಿ (ಪ್ರತಿಮೆಯ ಒಟ್ಟಾರೆ ಎತ್ತರ 108 ಅಡಿ)ಯ ಈ ಪ್ರತಿಮೆಯನ್ನು ಶುಕ್ರವಾರ ಪ್ರಧಾನಿ ಮೋದಿ ಅವರು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಇಂಥ ಬಹುದೊಡ್ಡ ಕಲಾಕೃತಿ ನಿರ್ಮಾಣದ ಹಿಂದಿರುವುದು ಪದ್ಮವಿಭೂಷಣ ರಾಮ ಸುತಾರ್‌ ಆರ್ಟ್ಸ್‌ ಆ್ಯಂಡ್‌ ಕ್ರಿಯೇಷನ್ಸ್‌ ಸಂಸ್ಥೆ. ಪ್ರತಿಮೆಯ ವಿನ್ಯಾಸದ ಹಿಂದೆ ನಿಂತವರು ರಾಮಸುತಾರ್‌ ಅವರ ಪುತ್ರ ಅನಿಲ್‌ ಸುತಾರ್‌. ಅವರು ‘ಕನ್ನಡಪ್ರಭ’ದ ಜತೆಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ...

* ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಕುರಿತು ನಿಮ್ಮ ಅನಿಸಿಕೆಗಳು?
ಅಂದಿನ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಕರೆ ಮಾಡಿ, ನಾವು ಕೆಂಪೇಗೌಡರ ಪ್ರತಿಮೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಅದಕ್ಕಾಗಿ ನಿಮಗೆ ಕರೆ ಮಾಡಿದ್ದೇವೆ ಎಂದರು. ನಮಗೂ ಖುಷಿಯಾಯ್ತು. ಬಳಿಕ 90 ಅಡಿ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗ್ತು. ಮೊದಲು ಕೆಂಪೇಗೌಡರ ಪ್ರತಿಮೆಯ ಮಾದರಿಯೊಂದನ್ನು ತಯಾರಿಸಿದೆವು. ಇದನ್ನು ಆದಿಚುಂಚನಗಿರಿ ಶ್ರೀಗಳು ಹಾಗೂ ಅಶ್ವತ್ಥ ನಾರಾಯಣ ಅವರು ವೀಕ್ಷಿಸಿ ಹಸಿರು ನಿಶಾನೆ ಕೊಟ್ಟರು. ನಂತರ 9 ಅಡಿಗಳ ಪ್ರತಿಮೆ ನಿರ್ಮಾಣ ಮಾಡಿದೆವು. ಆ ನಂತರ ಶ್ರೀಗಳ ನೇತೃತ್ವದ ಸಮಿತಿ ಬಂದು ನೋಡಿ ಸಮ್ಮತಿಸಿದರು. 90 ಅಡಿಗಳ ದೊಡ್ಡ ಪ್ರತಿಮೆ ನಿರ್ಮಾಣಕ್ಕೂ ಮುನ್ನ 9 ಅಡಿ ಪ್ರತಿಮೆಯನ್ನು ತ್ರೀಡಿ ಸ್ಕ್ಯಾ‌ನರ್‌ಗಳ ಮೂಲಕ ಸ್ಕ್ಯಾ‌ನ್‌ ಮಾಡಿ ದೊಡ್ಡದು ಮಾಡಲಾಯಿತು. ಆ ಬಳಿಕ ಅದನ್ನು 30 ಅಡಿಯ ಮೂರು ಭಾಗಗಳಾಗಿ ವಿಂಗಡಿಸಿಕೊಂಡು ಥರ್ಮೋಕೋಲ್‌ನಲ್ಲಿ ಮೊದಲು 90 ಅಡಿ ಪ್ರತಿಮೆಯನ್ನು ನಿರ್ಮಿಸಲಾಯಿತು. ಬಳಿಕ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಲ್ಲಿ ಪ್ರತಿಮೆ ಮಾಡಲಾಯ್ತು. ಉಡುಪು, ಶೂ, ಮೀಸೆ ಸೇರಿ ಎಲ್ಲಾ ಡಿಸೈನ್‌ಗಳನ್ನು ಅಳವಡಿಸಲಾಯಿತು. ಆ ಬಳಿಕ ಕಂಚಿನ ಎರಕ ಹೊಯ್ಯಲಾಯ್ತು. ಇದೆಲ್ಲ ಆದ ಮೇಲೆ ಪ್ರತಿಮೆಯ ಒಂದೊಂದೇ ಭಾಗವನ್ನು ನಿರ್ಮಾಣ ಸ್ಥಳಕ್ಕೆ ಕೊಂಡ್ಯೊಲಾಯಿತು. ಅಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಆದಿಯಾಗಿ ಎಲ್ಲರೂ ಪ್ರತಿಮೆ ನೋಡಿ ಖುಷಿಪಟ್ಟರು. ಹವಾಮಾನ, ಮಳೆಯಿಂದಾಗಿ ಪ್ರತಿಮೆ ಅಳವಡಿಕೆ ಕಾರ್ಯ ಸ್ವಲ್ಪ ವಿಳಂಬವಾಯ್ತು ಅಷ್ಟೆ.

ಪ್ರಧಾನಿ ಮೋದಿ ಭದ್ರತೆಗೆ 4 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

* ನಾಡಪ್ರಭುವಿನ ಪ್ರತಿಮೆ ವಿಶೇಷತೆಗಳೇನು?
ಇತಿಹಾಸದ ಪುಟಗಳಲ್ಲಿರುವ ಹಲವು ಫೋಟೋಗಳು, ಪೇಟಿಂಗ್ಸ್‌ಗಳನ್ನು ನಾವು ಮೊದಲ ಅಧ್ಯಯನ ಮಾಡಿದೆವು. ಅವರ ಅಕ್ಕಪಕ್ಕದ ರಾಜರುಗಳ ಕುರಿತಾಗಿ ತಿಳಿದುಕೊಳ್ಳಲಾಯ್ತು. ಇವೆಲ್ಲಕ್ಕೂ ಮಿಗಿಲಾಗಿ ಇವರು ಬೆಂಗಳೂರು ಕಟ್ಟಿದ ರಾಜ. ರಾಜರು ಹೇಗೆ ಉಡುಪು ಧರಿಸುತ್ತಾರೆ ಅನ್ನೋದು ಕೂಡ ಅಧ್ಯಯನ ಮಾಡಲಾಯಿತು. ಉಬ್ಬಿರುವ ಎದೆ, ಅವರ ಎಡ ಕಾಲು ಕಲ್ಲು ಮೇಲೆ ಇಟ್ಟಿರುವುದು, ಅದರ ಉದ್ದೇಶ, ಹೀಗೆ ಎಲ್ಲವನ್ನೂ ಅಧ್ಯಯನ ನಡೆಸಿದೆವು. ಕೆಂಪೇಗೌಡರ ಈ ಪ್ರತಿಮೆ ‘ನಾನು ನಿರ್ಮಾಣ ಮಾಡುತ್ತಿರುವ ಬೆಂಗಳೂರು ಹೇಗಿದೆ ಅನ್ನುವುದು’ ನೋಡುತ್ತಿರುವ ದೃಶ್ಯ. ದೊಡ್ಡ ಮೀಸೆ, ಪೇಟಾ, ಕತ್ತು ಮತ್ತು ಅದರ ಜತೆಗೆ ಕಿವಿಗೆ ಏನು ಧರಿಸುತ್ತಿದ್ದರು, ಧರಿಸುತ್ತಿದ್ದ ಉಡುಪು, ಶೂ ಹೀಗೆ ಎಲ್ಲವನ್ನೂ ಅಧ್ಯಯನ ಮಾಡಿ ಅಂತಿಮವಾಗಿ ಸಮಿತಿಯಿಂದ ಒಪ್ಪಿಗೆ ಪಡೆದೇ ಕಂಚಿನ ಎರಕ ಹೊಯ್ಯಲಾಯಿತು.

* ರಾಮ್‌ ಸುತಾರ್‌ ಆರ್ಟ್ಸ್‌ ಮತ್ತು ಕರ್ನಾಟಕದ ಸಂಬಂಧ ಕುರಿತು ಹೇಳೋದಾದ್ರೆ?
ಕರ್ನಾಟಕ ಸರ್ಕಾರದ ಜೊತೆ ಸೇರಿ ಕೆಲಸ ಮಾಡುವುದಕ್ಕೆ ನಮಗೆ ಬಹಳ ಖುಷಿಯಾಗುತ್ತದೆ. ಪ್ರತಿಯೊಬ್ಬರು ನಮ್ಮ ಕೆಲಸವನ್ನು ಮೆಚ್ಚಿದ್ದಾರೆ. ವಿಧಾನಸೌಧ-ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆಯನ್ನು ಕೂಡ ನಮ್ಮ ಸಂಸ್ಥೆಯಿಂದಲೇ ಮಾಡಿದ್ದು. ನಂದಿಯ ಬಳಿ 153 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಕೂಡ ನಾವೇ ಮಾಡಿದ್ದು, ಇನ್ನೂ ಹಲವು ಪ್ರಾಜೆಕ್ಟ್ಗಳು ಬರುವ ಸಾಧ್ಯತೆ ಇದೆ.

* ಕೆಂಪೇಗೌಡರ ಪ್ರತಿಮೆಗೆ ಎಷ್ಟು ಸಮಯ ಬೇಕಾಯ್ತು?
ಹೆಚ್ಚು ಕಡಿಮೆ 14 ತಿಂಗಳು ಈ ಪ್ರತಿಮೆ ನಿರ್ಮಿಸಲೆಂದೇ ತೆಗೆದುಕೊಂಡಿದ್ದೇವೆ. ಥರ್ಮಕೋಲ್‌ ಪ್ರತಿಮೆಯಿಂದ ಹಿಡಿದು ಕಂಚಿನ ಎರಕ ಹೊಯ್ಯುವ ತನಕ 14 ತಿಂಗಳು ಸಮಯ ಹಿಡಿದಿದೆ. ಇದರ ಜೊತೆಗೆ ಕೆಲ ಭಾವಚಿತ್ರಗಳನ್ನು ತಯಾರಿಸಿಕೊಡಲಾಗಿದೆ.

* ನೀವು ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದು ಹೇಗೆ? ಪ್ರೇರಣೆ ಏನು?
ನಮ್ಮ ತಂದೆ ರಾಮ ಸುತಾರ್‌ ಅವರೇ ನನಗೆ ಮಾದರಿ, ಪ್ರೇರಣೆ. 1947ರಿಂದಲೂ ನಮ್ಮ ತಂದೆ ಇದೇ ಕೆಲಸ ಮಾಡುತ್ತಿದ್ದಾರೆ. ನಾನು 20 ವರ್ಷದವನಾಗಿದ್ದಾಗ ಅಂದರೆ 1947ರಲ್ಲಿ ಅವರು ಮೊದಲ ಪ್ರತಿಮೆ ತಯಾರಿಸಿದ್ದರು. ಅವರ ಕೆಲಸ ನೋಡಿಕೊಂಡೇ ಬೆಳದೆ. ಅವರಿಗೂ ಕೆಲಸದಲ್ಲಿ ಸಣ್ಣಪುಟ್ಟಸಹಾಯ ಮಾಡುತ್ತಿದ್ದೆ. ನಾನು ಆರ್ಕಿಟೆಕ್ಚರ್‌ ಓದಿಕೊಂಡಿದ್ದೇನೆ. ಈ ಜ್ಞಾನ ನನಗೆ ಬಹಳ ಸಹಾಯಕಾರಿಯಾಗಿದೆ. ಈಗಲೂ ಆಗುತ್ತಿದೆ.

ಅಭಿವೃದ್ಧಿಗೆ ಪ್ರೇರಣೆ ಆಗಲಿ ಎಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ

* ಇತಿಹಾಸ ಪುರುಷ ನಾಡಪ್ರಭುವಿನ ಪ್ರತಿಮೆ ನಿರ್ಮಾಣದ ವೇಳೆ ನೀವು ಎದುರಿಸಿದ ಸವಾಲುಗಳೇನು?
ಯಾವುದೇ ದೊಡ್ಡ ಯೋಜನೆ ಕೈಗೆತ್ತಿಕೊಂಡಾಗ ಅದನ್ನು ನಾವು ಸವಾಲು ಅಂತ ಅಂದುಕೊಳ್ಳುವುದಿಲ್ಲ. ನಾವು ಯಾವುದೇ ಪ್ರತಿಮೆ ಮಾಡುವಾಗ ಹೆಚ್ಚಿನ ಶ್ರದ್ಧೆ ವಹಿಸುತ್ತೇವೆ. ಆದರೆ ಇಂಥ ದೊಡ್ಡ ಯೋಜನೆಗಳನ್ನು ಮಾಡುವಾಗ ಅಲ್ಲಿನ ಜಾಗ, ಹವಾಮಾನ ಇಂಥವುಗಳನ್ನೂ ಗಮಿಸಬೇಕಾಗುತ್ತದೆ. ಆದರೆ ಈ ಯೋಜನೆ ಕೈಗೆತ್ತಿಕೊಂಡಾಗಿನಿಂದ ಯಾವುದೇ ಸವಾಲು ಅಥವಾ ಸಮಸ್ಯೆ ಎದುರಾಗಲಿಲ್ಲ. ಪ್ರತಿಯೊಂದನ್ನೂ ತಾಂತ್ರಿಕ ವರ್ಗದ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಲಾಗಿದೆ.