ಕೋಲ್ಕತ್ತಾ[ಫೆ.03]: ಪಶ್ಚಿಮ ಬಂಗಾಳದಲ್ಲಿ ನಡೆದ ಭಯಾನಕ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗುಂಪೊಂದು ಶಿಕ್ಷಕಿ ಹಾಗೂ ಆಕೆಯ ಸಹೋದರಿಯ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ನಡುರಸ್ತೆಯಲ್ಲಿ ಎಳೆದೊಯ್ದಿರುವ ದೃಶ್ಯಗಳಿವೆ. ಇನ್ನು ಈ ಗುಂಪಿನ ನೇತೃತ್ವ ಟಿಎಂಸಿ ಪಂಚಾಯತ್ ನಾಯಕ ಅಮಲ್ ಸರ್ಕಾರ್ ಎಂಬಾತ ವಹಿಸಿದ್ದ ಎಂಬುವುದೇ ಆಘಾತಕಾರಿ ವಿಚಾರ. ಅಷ್ಟಕ್ಕೂ ಅವರನ್ನೇಕೆ ಹೀಗೆ ಎಳೆದಾಡಿದ್ರು? ಮುಂದಿದೆ ವಿವರ

ಹೌದು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ್ ನಲ್ಲಿ ರವಿವಾರ ಈ ಘಟನೆ ನಡೆದಿದ್ದು, ಶಿಕ್ಷಕಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಅವರನ್ನು ರಸ್ತೆಯಲ್ಲಿ ಎಳೆದೊಯ್ಯಲಾರಂಭಿಸಿದ್ದಾರೆ. ಹೀಗಿರುವಾಗ ಆಕೆಯ ಸಹೋದರಿ ಈ ನಡೆಯನ್ನು ವಿರೋಧಿಸಿದ್ದು, ಆಕ್ರೋಶಗೊಂಡ ಗುಂಪು ಆಕೆಗೆ ಕಾಲಿನಿಂದ ಒದ್ದು ಥಳಿಸಿ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಇವರು ಪಂಚಾಯತ್ ನಿರ್ಮಿಸಲಿದ್ದ ರಸ್ತೆಗೆ ಜಮೀನು ನೀಡುವುದಿಲ್ಲ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದ್ದು. ಇನ್ನು ಈ ಅಮಾನವೀಯ ಘಟನೆ ಬೆನ್ನಲ್ಲೇ ಟಿಎಂಸಿ ಜಿಲ್ಲಾ ನಾಯಕಿ ಅರ್ಪಿತಾ ಘೋಷ್ ಪಂಚಾಯತ್ ನಾಯಕ ಅಮಲ್ ಸರ್ಕಾರ್ ನನ್ನು ಅಮಾನತ್ತುಗೊಳಿಸಲು ಆದೇಶಿಸಿದ್ದಾರೆ. ಹೀಗಿದ್ದರೂ ಈವರೆಗೆ ಈ 'ಜನನಾಯಕ'ನನ್ನು ಪೊಲೀಸರು ಬಂಧಿಸಿಲ್ಲ. 

ಘಟನೆಯ ವಿಡಿಯೋ ಸದ್ಯ ಟ್ವಿಟರ್ ನ್ಲಲಿ ಹರಿದಾಡಲಾರಂಭಿಸಿದೆ. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮಹಿಳೆಯರು ತಮ್ಮ ಮನೆ ಎದುರು 12 ಫೀಟ್ ಅಗಲದ ರಸ್ತೆ ನಿರ್ಮಿಸುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಇದಕ್ಕೆ ತಾವು ಒಪ್ಪಿಕೊಂಡಿದ್ದೆವು ಎಂದಿದ್ದಾರೆ. ಆದರೆ ಇದಾದ ಬಳಿಕ ಪಂಚಾಯತ್ ರಸ್ತೆಯನ್ನು 24 ಫೀಟ್ ಅಗಲ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಹೀಗಿರುವಾಗ ಈ ಸಹೋದರಿಯರು ರಸ್ತೆಗೆ ಹೆಚ್ಚು ಭೂಮಿ ಬಿಟ್ಟುಕೊಡಬೇಕಾಗಿತ್ತು. ಹೀಗಾಗಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ಅಧಿಕಾರಿಗಳು ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಈ ವೇಳೆ ಸಹೋದರಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಹೋದರಿಯರ ಈ ನಡೆಯಿಂದ ಆಕ್ರೋಶಗೊಂಡ ಅಮಲ್ ಸರ್ಕಾರ್ ಬೆಂಬಲಿಗರೆಲ್ಲಾ ಸೇರಿ ಅವರನ್ನು ರಸ್ತೆಯಲ್ಲಿ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ.

ಬಳಿಕ ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಶಿಕ್ಷಕಿ ಹಾಗೂ ಆಕೆಯ ಸಹೋದರಿಯ ಸಹೋದರಿಯ ದೂರು ದಾಖಲಿಸಿಕೊಂಡಿದ್ದಾರೆಯಾದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ತಮ್ಮ ಮಕ್ಕಳನ್ನು ಎಳೆದಾಡುತ್ತಿಡುವುದನ್ನು ಕಂಡ ತಾಯಿ ತಡೆಯಲು ಬಂದಾಗ ಆಕೆಯನ್ನೂ ಸರ್ಕಾರ್ ಬೆಂಬಲಿಗರು ಎಳೆದಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಪುಟ್ಟಕ್ಕನ ಹೈವೇ ಸಿನಿಮಾ ನೆನಪಿಸಿದ ಘಟನೆ

ಈ ಘಟನೆ 2011ರಲ್ಲಿ ತೆರೆಕಂಡ ಪುಟ್ಟಕ್ಕನ ಹೈವೇ ಸಿನಿಮಾ ನೆನಪಿಸಿದೆ. ಬಡ ವಿಧವೆಯೊಬ್ಬಳು ರಸ್ತೆ ನಿರ್ಮಾಣದ ವೇಳೆ ತನ್ನ ಜಮೀನನ್ನು ಉಳಿಸಿಕೊಳ್ಳಲು ಸರ್ಕಾರದ ಜೊತೆ ನಡೆಸುವ ಈ ಸಮರದ ಕತೆ ಎಲ್ಲರ ಹೃದಯ ಹಿಂಡಿತ್ತು.