ಕೋಲ್ಕತಾ(ಮೇ.06): ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಮಮತಾ ಬ್ಯಾನರ್ಜಿ, ಪ್ರಮಾಣ ವಚನ ಸ್ವೀಕರಿಸುತ್ತಲೇ ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಘೋಷಿಸಿದ್ದಾರೆ.

ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಅವರು ರಾಜ್ಯವ್ಯಾಪಿ ಜನತಾ ಕಫä್ರ್ಯ ಘೋಷಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ ಜಾರಿಗೆ ಯಾವುದೇ ಮೀನಮೇಷ ಎಣಿಸದ ದೀದಿ, ತಮ್ಮ ನೂತನ ಸರ್ಕಾರ ಮೊದಲ ನಿರ್ಧಾರವಾಗಿ ರಾಜ್ಯದಲ್ಲಿ ಜನತಾ ಕಫä್ರ್ಯ ಜಾರಿಗೊಳಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಸಿಎಂ ಮಮತಾ, ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಏನೆಲ್ಲಾ ಅಗತ್ಯ ಕ್ರಮ ಕೈಗೊಳ್ಳಬಹುದೆಂದು ಚರ್ಚಿಸಿ ಅದರಂತೆ ನಿರ್ಧಾರ ಪ್ರಕಟಿಸಿದ್ದಾರೆ.

ಏನೇನು ಕ್ರಮ: ಗುರುವಾರದಿಂದಲೇ ಜಾರಿಗೆ ಬರುವಂತೆ ಲೋಕಲ್‌ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಶೇ.50ರಷ್ಟುಪ್ರಯಾಣಿಕರೊಂದಿಗೆ ರಾಜ್ಯ ಸಾರಿಗೆ ಮತ್ತು ಮೆಟ್ರೋ ಸೇರಿದಂತೆ ಇನ್ನಿತರ ಸಾರಿಗೆ ವ್ಯವಸ್ಥೆ ಕಾರ‍್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ರಾಜಕೀಯ, ಸಾಮಾಜಿಕ ಕಾರ‍್ಯಕ್ರಮ ನಿಷೇಧಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.50ರಷ್ಟುಜನ ಮಾತ್ರ ಕಾರ‍್ಯ ನಿರ್ವಹಿಸಲಿದ್ದಾರೆ. ಶಾಪಿಂಗ್‌ ಮಾಲ್‌ಗಳು, ಜಿಮ್‌ಗಳು, ಸಿನಿಮಾ ಥಿಯೇಟರ್‌ಗಳು, ಬ್ಯೂಟಿ ಪಾರ್ಲರ್‌ಗಳು ಪೂರ್ತಿಯಾಗಿ ಬಂದ್‌ ಆಗಿರಲಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.